ಮಹತ್ವದ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲಿ ನೀರಸ ಪ್ರದರ್ಶನ ತೋರಿದ ಟೀಂ ಇಂಡಿಯಾ(Team India) ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್(Semi Final) ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರೀ ಅಂತರದ ಸೋಲನುಭವಿಸುವ ಮೂಲಕ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿದೆ.
ಅಡಿಲೇಡ್ ಓವಲ್ನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ಪ್ರದರ್ಶನ ತೋರಿದ ಇಂಗ್ಲೆಂಡ್ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ಗೆ 168 ರನ್ಗಳ ಪೈಪೋಟಿಯ ಮೊತ್ತವನ್ನೇ ಕಲೆಹಾಕಿತು. ಆದರೆ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೇ ಕೇವಲ 16 ಓವರ್ಗಳಲ್ಲಿ 170 ರನ್ಗಳಿಸುವ ಮೂಲಕ ಗೆಲುವಿನ ಕೇಕೆಹಾಕಿತು. ಸೆಮಿಫೈನಲ್ ಸೋಲಿನೊಂದಿಗೆ ಭಾರತ ಟಿ20 ವಿಶ್ವಕಪ್ ಗೆಲ್ಲುವ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಕನಸು ನುಚ್ಚು ನೂರಾಯಿತು.
ಆಸರೆಯಾದ ಕೊಹ್ಲಿ-ಪಾಂಡ್ಯ:
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಕೆಎಲ್ ರಾಹುಲ್(5) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ಜೊತೆಯಾದ ನಾಯಕ ರೋಹಿತ್ ಶರ್ಮ(27) ಹಾಗೂ ವಿರಾಟ್ ಕೊಹ್ಲಿ(50) 2ನೇ ವಿಕೆಟ್ಗೆ 45 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ರೋಹಿತ್ ವಿಕೆಟ್ ಪತನದ ಬಳಿಕ ಬಂದ ಸೂರ್ಯಕುಮಾರ್ ಯಾದವ್(14) ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ಜೊತೆಯಾದ ಹಾರ್ದಿಕ್ ಹಾಗೂ ಕೊಹ್ಲಿ ತಂಡದ ರನ್ ವೇಗವನ್ನ ಹೆಚ್ಚಿಸಿದರು. ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದರೆ, ಹಾರ್ದಿಕ್ ಪಾಂಡ್ಯ, 33 ಬಾಲ್ಗಳಲ್ಲಿ 4 ಬೌಂಡರಿ, 5 ಸಿಕ್ಸ್ ಮೂಲಕ 63 ರನ್ಗಳಿಸಿ ಅಬ್ಬರಿಸಿದರು. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 168 ರನ್ಗಳಿಸಿತು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡನ್ 3 ವಿಕೆಟ್ ಪಡೆದು ಮಿಂಚಿದರು.
ಹೇಲ್ಸ್-ಬಟ್ಲರ್ ಅಬ್ಬರದ ಆಟ:
ಟೀಂ ಇಂಡಿಯಾದ 169 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮೊರೆ ಹೋಯಿತು. ಭಾರತೀಯ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಅಲೆಕ್ಸ್ ಹೇಲ್ಸ್, 47 ಬಾಲ್ಗಳಲ್ಲಿ 7 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ ಅಜೇಯ 86* ರನ್ಗಳಿಸಿ ಅಬ್ಬರಿಸಿದರೆ. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಜೋಸ್ ಬಟ್ಲರ್, 49 ಬಾಲ್ಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಮೂಲಕ ಅಜೇಯ 80* ರನ್ಗಳಿಸಿ ಮೊದಲ ವಿಕೆಟ್ಗೆ 170 ರನ್ಗಳಿಸುವ ಮೂಲಕ ಇಂಗ್ಲೆಂಡ್ಗೆ 10 ವಿಕೆಟ್ಗಳ ಭರ್ಜರಿ ಗೆಲುವು ತಂದುಕೊಟ್ಟರು.
ಸೆಮೀಸ್ ಸೋಲಿನೊಂದಿಗೆ ಟೀಂ ಇಂಡಿಯಾದ ಪ್ರಶಸ್ತಿ ಗೆಲುವಿನ ಕನಸು ಕನಸಾಗಿಯೇ ಉಳಿದರೆ. 10 ವಿಕೆಟ್ಗಳ ಗೆಲುವಿನೊಂದಿಗೆ ಫೈನಲ್ಗೆ ಎಂಟ್ರಿಕೊಟ್ಟಿರುವ ಇಂಗ್ಲೆಂಡ್, ನ.13ರಂದು ಮೆಲ್ಬೋರ್ನ್ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಸವಾಲು ಎದಿರಿಸೋಕ್ಕೆ ಕಾಯುತ್ತಿದೆ.