ನಾಯಕ ಮೋಯಿನ್ ಅಲಿ (63 ರನ್ ಹಾಗೂ 28ಕ್ಕೆ 2) ಇವರ ಸೊಗಸಾದ ಪ್ರದರ್ಶನದ ಬಲದಿಂದ ಇಂಗ್ಲೆಂಡ್ ಬ್ರಿಡ್ಜ್‌ಟೌನ್ ನಲ್ಲಿ ನಡೆದ ನಾಲ್ಕನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ, ಐದು ಪಂದ್ಯಗಳ ಟಿ-20 ಸರಣಿಯಲ್ಲಿ 2-2 ರಿಂದ ಸಮನಾಗಿಸಿದೆ.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 193 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 159 ರನ್ ಕಲೆ ಹಾಕಿ ಸೋಲು ಕಂಡಿತು.
ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್ ಗೆ ಆರಂಭಿಕ ಜೇಸನ್ ರಾಯ್ ಹಾಗೂ ಜೇಮ್ಸ್ ವಿನ್ಸ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು. 57 ಎಸೆತಗಳನ್ನು ಎದುರಿಸಿದ ಜೋಡಿ 85 ರನ್ ಸೇರಿಸಿ ಮಿಂಚಿತು. ರಾಯ್ 42 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿದರು. ಜೇಮ್ಸ್ ವಿನ್ಸ್ 34 ರನ್ ಗಳಿಗೆ ಆಟ ಮುಗಿಸಿದರು.
ನಾಲ್ಕನೇ ವಿಕೆಟ್ ಗೆ ಲಿಯಾಮ್ ಲಿವಿಂಗ್ ಸ್ಟೋನ್ (16) ಹಾಗೂ ಮೋಯಿನ್ ಅಲಿ ಜೋಡಿ ಸೊಗಸಾದ ಪ್ರದರ್ಶನ ನೀಡಿತು. ಈ ಜೋಡಿ 34 ಎಸೆತಗಳಲ್ಲಿ 65 ರನ್ ಸೇರಿಸಿತು. ಮೋಯಿನ್ ಅಲಿ ಕೇವಲ 28 ಎಸೆತಗಳಲ್ಲಿ 1 ಬೌಂಡರಿ, 7 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿದರು.
ವಿಂಡೀಸ್ ಪರ ಜೇಸನ್ ಹೋಲ್ಡರ್ ಮೂರು ವಿಕೆಟ್ ಕಬಳಿಸಿದರು. ಬ್ರಾಂಡನ್ ಕಿಂಗ್ (26) ಮತ್ತು ಕೈಲ್ ಮೇಯರ್ಸ್ ಜೋಡಿ ತಂಡಕ್ಕೆ ಉತ್ತಮ ಆರಂಭ ನೀಡಿತು. ಈ ಜೋಡಿ 44 ಎಸೆತಗಳಲ್ಲಿ 64 ರನ್ ಸೇರಿಸಿತು. ಕೈಲ್ ಮೇಯರ್ಸ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 23 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿದರು.
ಉಳಿದಂತೆ ನಿಕೋಲಸ್ ಪೊರನ್ 22, ಜೇಸನ್ ಹೋಲ್ಡರ್ 36, ಕಿರನ್ ಪೊಲಾರ್ಡ್ 18 ರನ್ ಬಾರಿಸಿದರು.
ಇಂಗ್ಲೆಂಡ್ ಪರ ಮೋಯಿನ್ ಅಲಿ 2, ರೀಸ್ ಟೋಪ್ಲಿ, ಆದಿಲ್ ರಶೀದ್, ಲಿಯಾಮ್ ಲಿವಿಂಗ್ ಸ್ಟೋನ್ ತಲಾ ಒಂದು ವಿಕೆಟ್ ಕಬಳಿಸಿದರು.