Syed Mushtaq Ali Trophy ಇಂಡಿಯನ್ ಡೊಮೆಸ್ಟಿಕ್ ಕ್ರಿಕೆಟ್(Indian Domestic Cricket)ನ ಪ್ರಮುಖ ಪಂದ್ಯಗಳಲ್ಲಿ ಒಂದಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಹಣಾಹಣಿಯಲ್ಲಿ ಹಿಮಾಚಲ ಪ್ರದೇಶ(Himachal Pradesh) ಹಾಗೂ ಮುಂಬೈ(Mumbai) ತಂಡಗಳು ಮುಖಾಮುಖಿಯಾಗಲಿವೆ.
ಪಂಜಾಬ್ ವಿರುದ್ಧ ಜಯ:
ಇಂದು ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ 13 ರನ್ಗಳ ಗೆಲುವು ಸಾಧಿಸುವ ಮೂಲಕ ಹಿಮಾಚಲ ಪ್ರದೇಶ ಫೈನಲ್ಗೆ ಎಂಟ್ರಿಕೊಟ್ಟಿತು. ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹಿಮಾಚಲ ಪ್ರದೇಶ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 176 ರನ್ಗಳಿಸಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಸುಮಿತ್ ವರ್ಮ(51) ಅರ್ಧಶತಕದ ಕಾಣಿಕೆ ನೀಡಿದರೆ. ಆಕಾಶ್ ವಸಿಷ್ಠ(43) ಹಾಗೂ ಪಂಕಜ್ ಜೈಸ್ವಾಲ್(27) ತಂಡಕ್ಕೆ ಆಸರೆಯಾದರು. ಹಿಮಾಚಲ ಪ್ರದೇಶ ನೀಡಿದ 177 ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಪರ ಶುಭ್ಮನ್ ಗಿಲ್(45), ಅನ್ಮೋಲ್ಪ್ರೀತ್ ಸಿಂಗ್(30), ನಾಯಕ ಮನ್ದೀಪ್ ಸಿಂಗ್(29*) ಹಾಗೂ ರಮನ್ದೀಪ್ ಸಿಂಗ್(29) ಉಪಯುಕ್ತ ರನ್ಗಳಿಸಿದರು ತಂಡಕ್ಕೆ ಗೆಲುವು ಸಿಗಲಿಲ್ಲ. ಹೀಗಾಗಿ 163 ರನ್ಗಳಿಗೆ ತನ್ನ ಹೋರಾಟ ನಿಲ್ಲಿಸಿದ ಪಂಜಾಬ್, 13 ರನ್ಗಳ ಸೋಲು ಕಂಡಿತು. ಹಿಮಾಚಲ ಪ್ರದೇಶ ಪರ ನಾಯಕ ರಿಷಿ ಧವನ್ 3, ಮಯಾಂಕ್ ದಾಗರ್ 2 ವಿಕೆಟ್ ಪಡೆದು ಮಿಂಚಿದರು.
ವಿದರ್ಭ ಮಣಿಸಿದ ಮುಂಬೈ:
ದಿನದ 2ನೇ ಸೆಮಿಫೈನಲ್ನಲ್ಲಿ ಬಲಿಷ್ಠ ಮುಂಬೈ 5 ವಿಕೆಟ್ಗಳಿಂದ ವಿದರ್ಭ ತಂಡವನ್ನ ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ಗಳಿಸಿತು. ತಂಡದ ಪರ ಜಿತೇಶ್ ಶರ್ಮ(46*), ವಾಂಖಡೆ(34) ಹಾಗೂ ಅತಾವರ್ ಥೈಡೆ(29) ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಈ ಗುರಿಯನ್ನ ಚೇಸ್ ಮಾಡಿದ ಮುಂಬೈ, 16.5 ಓವರ್ಗಳಲ್ಲಿ 5 ವಿಕೆಟ್ಗೆ 169 ರನ್ಗಳಿಸುವ ಮೂಲಕ ಗೆಲುವಿನ ನಗೆಬೀರಿತು. ಮುಂಬೈ ಪರ ಅದ್ಭುತ ಆಟವಾಡಿದ ಶ್ರೇಯಸ್ ಅಯ್ಯರ್, 44 ಬಾಲ್ಗಳಲ್ಲಿ 7 ಬೌಂಡರಿ, 4 ಸಿಕ್ಸ್ ಮೂಲಕ 73 ರನ್ಗಳಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
ನ.6ರಂದು ಫೈನಲ್ ಫೈಟ್:
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ನ.6ರಂದು ನಡೆಯಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಸಂಜೆ 4.30ಕ್ಕೆ ನಡೆಯುವ ಈ ಪಂದ್ಯದಲ್ಲಿ ಮುಂಬೈ ಹಾಗೂ ಹಿಮಾಚಲ ಪ್ರದೇಶ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.
ಇದನ್ನೂ ಓದಿ – https://sportskarnataka.com/shaheen-shah-afr…-50-t20i-wickets/