T20 CWC 2022 ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪಾಕಿಸ್ತಾನದ ನಾಯಕ ಬಾಬರ್ ಆಜ಼ಂ(Babar Azam) ಹಾಗೂ ಮೊಹಮ್ಮದ್ ರಿಜ್ವಾನ್(Mohammad Rizwan) ಜೋಡಿ ಟಿ20 ವಿಶ್ವಕಪ್(T20 World Cup) ಟೂರ್ನಿಯಲ್ಲಿ ಮತ್ತೊಂದು ವೈಫಲ್ಯ ಕಂಡಿದೆ. ಆಸ್ಟ್ರೇಲಿಯಾ(Australia)ದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಮುನ್ನ ಈ ಇಬ್ಬರು ಆಟಗಾರರ ಮೇಲೆ ದೊಡ್ಡಮಟ್ಟದ ನಿರೀಕ್ಷೆಯನ್ನ ಹೊಂದಲಾಗಿತ್ತು. ಆದರೆ ಸೂಪರ್-12 ಹಂತದಲ್ಲಿ ಈವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲೂ ಬಾಬರ್ ಆಜ಼ಂ ಹಾಗೂ ಮೊಹಮ್ಮದ್ ರಿಜ್ವಾನ್ ಅವರ ಬ್ಯಾಟ್‌ನಿಂದ ದೊಡ್ಡ ಇನ್ನಿಂಗ್ಸ್ ಹೊರ ಬಂದಿಲ್ಲ. ಅಲ್ಲದೇ ಈ ಇಬ್ಬರು ಆಟಗಾರರು ವೈಯಕ್ತಿಕವಾಗಿ ಸಹ ಹೇಳಿಕೊಳ್ಳುವ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕ ಬಾಬರ್ ಆಜ಼ಂ(0) ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದರೆ. ಮೊಹಮ್ಮದ್ ರಿಜ್ವಾನ್(4) ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲೂ ಈ ಇಬ್ಬರು ಆಟಗಾರರು ವೈಫಲ್ಯ ಅನುಭವಿಸಿದರು. ರಿಜ್ವಾನ್ 14 ರನ್‌ಗಳಿಗೆ ನಿರ್ಗಮಿಸಿದರೆ, ಬಾಬರ್ ಆಜಂ 4 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್(49) ಬ್ಯಾಟಿಂಗ್ ಲಯಕ್ಕೆ ಮರಳಿದರೆ, ನಾಯಕ ಬಾಬರ್ ಆಜ಼ಂ(4) ಮತ್ತೆ ಒಂದಂಕ್ಕಿಯ ಮೊತ್ತಕ್ಕೆ ಔಟಾಗುವ ಮೂಲಕ ತಮ್ಮ ಬ್ಯಾಟಿಂಗ್ ವೈಫಲ್ಯ ಮುಂದುವರೆಸಿದರು. ಇಷ್ಟಕ್ಕೇ ಮುಗಿಯದ ಪಾಕಿಸ್ತಾನ ತಂಡದ ಆರಂಭಿಕ ಜೋಡಿಯ ನೀರಸ ಪ್ರದರ್ಶನ, ಸೌತ್ ಆಫ್ರಿಕಾ ವಿರುದ್ದವೂ ಮುಂದುವರೆಯಿತು. ಗೆಲ್ಲಲ್ಲೇಬೇಕಾದ ಒತ್ತಡದ ನಡುವೆಯೂ ತಂಡಕ್ಕೆ ಆಸರೆಯಾದ ರಿಜ್ವಾನ್ ಹಾಗೂ ಬಾಬರ್, ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಮರಳಿದರು.
2021ರ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಈ ಜೋಡಿ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದರು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಬಾಬರ್ ಆಜ಼ಂ(303 ರನ್) ಹಾಗೂ ರಿಜ್ವಾನ್(281 ರನ್) ತಂಡದ ಸಕ್ಸಸ್‌ಗೆ ಕಾರಣರಾಗಿದ್ದರು. ಆದರೆ ಇದೀಗ ಆಸ್ಟ್ರೇಲಿಯಾ ನೆಲದಲ್ಲಿ ಈ ಜೋಡಿಯ ಆರ್ಭಟ ನಡೆಯದಿರುವುದು ಪಾಕಿಸ್ತಾನಕ್ಕೆ ದೊಡ್ಡಮಟ್ಟದ ಹಿನ್ನಡೆಗೆ ಕಾರಣವಾಗಿದೆ.
ಇದನ್ನೂ ಓದಿ – https://sportskarnataka.com/t20-world-cup-team-india-melbourne/