Suresh Raina – ಮತ್ತೆ ಕಮ್ ಬ್ಯಾಕ್ ಮಾಡ್ತಾರಾ ? ವಿಡಿಯೋದಲ್ಲಿದೆ ರೈನಾ ಸೀಕ್ರೆಟ್..!
ಸುರೇಶ್ ರೈನಾ ಮತ್ತೆ ಕಮ್ ಬ್ಯಾಕ್ ಮಾಡುತ್ತಾರೆ ಅನ್ನೋ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಕಾರಣ ಸುರೇಶ್ ರೈನಾ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋ.
ಹೌದು, ಸುರೇಶ್ ರೈನಾ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಅವರೇ ಸ್ವತಃ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸುರೇಶ್ ರೈನಾ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಆಡ್ತಾರೆ ಅಂತ ಹೇಳುತ್ತಿದ್ದಾರೆ.
ಸುರೇಶ್ ರೈನಾ ಅವರು 2020, ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಅದು ಕೂಡ ಆಪ್ತ ಗೆಳೆಯ ಎಮ್. ಎಸ್. ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ತಕ್ಷಣವೇ ಸುರೇಶ್ ರೈನಾ ಕೂಡ ನಿವೃತ್ತಿಯನ್ನು ಪ್ರಕಟಿಸಿದ್ದರು.
ಆದಾದ ನಂತರ ಐಪಿಎಲ್ ನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದ್ರೆ 2020ರ ಐಪಿಎಲ್ ನಲ್ಲಿ ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹೊರನಡೆದಿದ್ದರು. ಹಾಗೇ 2021ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.
ಆದಾದ ನಂತರ 2022ರ ಐಪಿಎಲ್ ನಲ್ಲಿ ಸುರೇಶ್ ರೈನಾ ಅನ್ ಸೋಲ್ಡ್ ಆಗಿದ್ದರು. ದಶಕಗಳಿಂದ ಸಿಎಸ್ ಕೆ ತಂಡದ ಭಾಗವಾಗಿದ್ದ ಸುರೇಶ್ ರೈನಾ ಅವರನ್ನು ಕ್ಯಾರೇ ಮಾಡಿರಲಿಲ್ಲ. ಅಷ್ಟೇ ಅಲ್ಲ, ಧೋನಿ ಕೂಡ ಸುರೇಶ್ ರೈನಾ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ಧೋನಿ ಮತ್ತು ಸಿಎಸ್ ಕೆ ತಂಡಕ್ಕೆ ಆಪ್ತರಾಗಿದ್ದ ಕಾರಣಕ್ಕೋ ಏನೋ ಸುರೇಶ್ ರೈನಾ ಅವರನ್ನು ಯಾವುದೇ ಫ್ರಾಂಚೆಸಿಗಳು ಖರೀದಿ ಕೂಡ ಮಾಡಿರಲಿಲ್ಲ. ಹೀಗಾಗಿ ಸುರೇಶ್ ರೈನಾ ಅವರು ಐಪಿಎಲ್ ನಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆ ಮಾಡಬೇಕಾಗಿತ್ತು.
ಇದೀಗ ಸುರೇಶ್ ರೈನಾ ಅವರು ಮತ್ತೆ ಕಮ್ ಬ್ಯಾಕ್ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಅಲ್ಲದೆ ಮುಂದಿನ ತಿಂಗಳಿಂದ ರಣಜಿ ಟೂರ್ನಿ ಸೇರಿದಂತೆ ದೇಶಿ ಟೂರ್ನಿಗಳು ನಡೆಯಲಿರುವುದರಿಂದ ರೈನಾ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಸುರೇಶ್ ರೈನಾ ಅವರು ಬ್ಯಾಟಿಂಗ್ ಅಭ್ಯಾಸ ನಡೆಸುವುದನ್ನು ನೋಡಿದಾಗ ಮುಂದಿನ ಐಪಿಎಲ್ ನಲ್ಲಿ ಆಡ್ತಾರೆ ಅನ್ನೋದು ಗ್ಯಾರಂಟಿಯಾಗಿದೆ. ಆದ್ರೆ ಯಾವ ತಂಡದ ಪರ ಅನ್ನೋದು ಮಾತ್ರ ನಿಗೂಢವಾಗಿದೆ.
ಯಾಕಂದ್ರೆ ಸುರೇಶ್ ರೈನಾ ಅವರಿಗೆ ಇನ್ನೂ ಆಡುವ ವಯಸ್ಸು ಇದೆ. ಸಾಮಥ್ರ್ಯವೂ ಇದೆ. ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ತಪ್ಪು ಮಾಡಿಕೊಂಡಿರುವ ರೈನಾಗೆ ಈಗ ಬುದ್ದಿ ಬಂದಿದೆ. ಆಪ್ತ ಗೆಳೆಯನಿಗೋಸ್ಕರ ತನ್ನ ಕ್ರಿಕೆಟ್ ಬದುಕನ್ನೇ ಮುಡುಪಾಗಿಟ್ಟಿರುವ ರೈನಾಗೆ ಧೋನಿ ಯಾವುದೇ ರೀತಿಯ ಸಹಾಯವನ್ನು ಮಾಡಲಿಲ್ಲ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ಬಾರಿ ಅವಮಾನ ಮಾಡಿದಾಗಲೂ ಧೋನಿ ಒಂದೇ ಒಂದು ಹೇಳಿಕೆಯನ್ನು ರೈನಾ ಪರ ಹೇಳಿರಲಿಲ್ಲ.
ಒಟ್ಟಿನಲ್ಲಿ ರೈನಾ ತನ್ನನ್ನು ಟೀಕೆ ಮಾಡಿದವರಿಗೆ, ಅವಮಾನ ಮಾಡಿದವರಿಗೆ ತಕ್ಕ ಉತ್ತರ ನೀಡಲು ಮುಂದಾಗಿದ್ದಾರೆ. ದೇಶಿ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಐಪಿಎಲ್ ನಲ್ಲಿ ಆಡುವುದೇ ರೈನಾ ಅವರ ಪ್ರಮುಖ ಗುರಿಯಾಗಿದೆ.