Asia Cup 2022- ಭಾರತವೇ ಗೆಲ್ಲುವ ನೆಚ್ಚಿನ ತಂಡ.. !
ಏಷ್ಯಾಕಪ್ ಟೂರ್ನಿಗಿಂತಲೂ ಅದನ್ನು ಇಂಡೋ ಪಾಕ್ ಫೈಟ್ ಅಂತನೇ ಬಣ್ಣಿಸಲಾಗುತ್ತಿದೆ.
ಹೌದು, ಆಗಸ್ಟ್ 28ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ನೋಡಲು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ.
ಈಗಾಗಲೇ ಈ ಪಂದ್ಯದ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿದೆ. ಉಭಯ ತಂಡಗಳು ಈಗಾಗಲೇ ಸಾಕಷ್ಟು ತಯಾರಿಯನ್ನು ಕೂಡ ಮಾಡಿಕೊಂಡಿವೆ. ಹಾಗೇ ಪಂದ್ಯ ಆರಂಭಕ್ಕೆ ಮುನ್ನವೇ ಎರಡು ತಂಡಗಳು ಆಘಾತ ಅನುಭವಿಸಿವೆ. ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಜಸ್ಪ್ರಿತ್ ಬೂಮ್ರಾ ಅನುಪಸ್ಥಿತಿ ಪಾಕ್ ಗೆ ವರದಾನವಾಗುವ ಸಾಧ್ಯತೆಗಳಿವೆ. ಹಾಗೇ ಪಾಕ್ ನ ಘಾತಕ ವೇಗಿ ಶಾಹೀನ್ ಆಫ್ರಿದಿ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ. ಇದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಿದೆ. ಯಾಕಂದ್ರೆ 2021ರ ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿಯವರ ವಿಕೆಟ್ ಗಳನ್ನು ಕಬಳಿಸಿ ಟೀಮ್ ಇಂಡಿಯಾ ಸೋಲುವಂತೆ ಮಾಡಿದ್ದು ಕೂಡ ಶಾಹೀನ್ ಆಫ್ರಿದಿ. ಹೀಗಾಗಿ ಜಸ್ಪ್ರಿತ್ ಬೂಮ್ರಾ ಮತ್ತು ಶಾಹೀನ್ ಆಫ್ರಿದಿ ಅನುಪಸ್ಥಿತಿ ಎರಡು ತಂಡಗಳ ಬೌಲಿಂಗ್ ವಿಭಾಗಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಬಹುದು.
ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳು ಇಲ್ಲಿಯವರೆಗೆ ಏಷ್ಯಾಕಪ್ ನಲ್ಲಿ 14 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಎಂಟು ಬಾರಿ ಭಾರತ ಗೆದ್ರೆ, ಐದು ಬಾರಿ ಪಾಕ್ ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ. ಹೀಗಾಗಿ ಏಷ್ಯಾಕಪ್ ನಲ್ಲಿ ಭಾರತವೇ ಗೆಲ್ಲುವ ಫೆವರೀಟ್ ತಂಡವಾಗಿದೆ. ಆದ್ರೂ ಪಾಕ್ ತಂಡ ಕೂಡ ಭಾರತಕ್ಕೆ ಸವಾಲು ಒಡ್ಡುವಂತಹ ಸಾಮಥ್ರ್ಯವನ್ನು ಹೊಂದಿದೆ.
ಇನ್ನು ಭಾರತ ತಂಡಕ್ಕೆ 2021ರ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳುವ ತವಕವೂ ಇದೆ. ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದು ಒಂದೇ ಒಂದು ಬಾರಿ. ಅದು ಕೂಡ 2021ರ ವಿಶ್ವಕಪ್ ನಲ್ಲಿ. ಹೀಗಾಗಿ ಈ ಸೋಲು ಟೀಮ್ ಇಂಡಿಯಾವನ್ನು ಈಗಲೂ ಕಾಡುತ್ತಿದೆ. ಹಾಗಾಗಿ ಏಷ್ಯಾಕಪ್ ನಲ್ಲಿ ಅಜೇಯ ತಂಡವಾಗಿ ಗೆದ್ದು ಪ್ರಶಸ್ತಿಯನ್ನು ಉಳಿಸಿಕೊಳ್ಳುವತ್ತ ರೋಹಿತ್ ಪಡೆ ಚಿತ್ತವನ್ನಟ್ಟಿದೆ.
ಏಷ್ಯಾಕಪ್ ಟೂರ್ನಿ ಆಗಸ್ಟ್ 27ರಿಂದ ಆರಂಭವಾಗಲಿದೆ. ಎ ಬಣದಲ್ಲಿ ಭಾರತ, ಪಾಕಿಸ್ತಾನ ಮತ್ತು ಅರ್ಹತಾ ಸುತ್ತಿನ ಚಾಂಪಿಯನ್ ತಂಡ ಕಾದಾಟ ನಡೆಸಿದ್ರೆ, ಬಿ ಬಣದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಸೂಪರ್ -4 ನ ಅಗ್ರ ತಂಡಗಳು ಫೈನಲ್ ನಲ್ಲಿ ಕಾದಾಟ ನಡೆಸಲಿವೆ.