“2022ರ ಮಾರ್ಚ್ 4” ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ʼಸ್ಪೆಷಲ್ ಫ್ರೈಡೇʼ ಹಾಗೂ ವಿಶ್ವ ಕ್ರಿಕೆಟ್ನ ಅವಿಸ್ಮರಣೀಯ ದಿನ ಎಂದರೆ ತಪ್ಪಾಗಲಾರದು. ವಿಶ್ವ ಕ್ರಿಕೆಟ್ನ ಮೂರು ಪ್ರಮುಖ ಪಂದ್ಯಾವಳಿಗಳು ಒಂದೇ ದಿನದಂದು ಆರಂಭವಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಭಾರತ v ಶ್ರೀಲಂಕಾ ಪ್ರಥಮ ಟೆಸ್ಟ್
ಅತಿಥೇಯ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ಇಂದಿನಿಂದ ಆರಂಭಗೊಳ್ಳುತ್ತಿದೆ. ಈ ಪಂದ್ಯ ಇತರೆ ಟೆಸ್ಟ್ ಪಂದ್ಯಗಳಂತೆ ಅನಿಸಿದರು, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಹಾಗೂ ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಇದು ಸ್ಪೆಷಲ್ ಪಂದ್ಯವಾಗಿದೆ.
ವಿರಾಟ್ ಕೊಹ್ಲಿ: ಪ್ರಮುಖವಾಗಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಟೆಸ್ಟ್ ವೃತ್ತಿ ಜೀವನದ 100ನೇ ಪಂದ್ಯ ಆಡುತ್ತಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿಗೆ ಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಅವಿಸ್ಮರಣೀಯವಾಗಿದೆ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿ ಸಹ 100ನೇ ಟೆಸ್ಟ್ನಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆಯಲ್ಲಿದ್ದಾರೆ.

ರೋಹಿತ್ ಶರ್ಮ: ಟೀಂ ಇಂಡಿಯಾದ ನೂತನ ಸಾರಥಿ ರೋಹಿತ್ ಶರ್ಮ ಅವರಿಗೂ ಲಂಕಾ ವಿರುದ್ಧದ ಮೊದಲ ಟೆಸ್ಟ್ ಸದಾ ನೆನಪಿನಲ್ಲಿ ಉಳಿಯುವ ಪಂದ್ಯವಾಗಿದೆ. ಇತ್ತೀಚಿಗೆ ಟೀಂ ಇಂಡಿಯಾದ ಏಕದಿನ ಹಾಗೂ ಟಿ20 ತಂಡದ ಕ್ಯಾಪ್ಟನ್ ಆಗಿ ಸಕ್ಸಸ್ ಕಂಡಿರೋ ಹಿಟ್ಮ್ಯಾನ್, ಟೆಸ್ಟ್ ತಂಡದ ನಾಯಕನಾಗಿ ಮೊದಲ ಬಾರಿಗೆ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ, ಗೆಲುವನ್ನ ಎದುರು ನೋಡುತ್ತಿದ್ದಾರೆ.
ಪುಜಾರ-ರಹಾನೆ: ಭಾರತ ಕ್ರಿಕೆಟ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ಗಳು ಎನಿಸಿರುವ ಚೇತೇಶ್ವರ ಪುಜಾರ ಹಾಗೂ ಅಜಿಂಕ್ಯಾ ರಹಾನೆ ಜೋಡಿಗೂ ಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನ ಮರೆಯಲು ಸಾಧ್ಯವಿಲ್ಲ. ಟೀಂ ಇಂಡಿಯಾ ಟೆಸ್ಟ್ ತಂಡದ ಕಾಯಂ ಸದಸ್ಯರಾಗಿದ್ದ ಈ ಇಬ್ಬರು ಆಟಗಾರರು ತಂಡದಲ್ಲಿ ಇಲ್ಲದೆ ಒಂಭತ್ತು ವರ್ಷದ ಬಳಿಕ ಭಾರತ ಟೆಸ್ಟ್ ಪಂದ್ಯವಾಡುತ್ತಿದೆ. ಮತ್ತೊಂದು ವಿಶೇಷ ಎಂದರೆ ಕಳೆದ ಬಾರಿ ಪುಜಾರ – ರಹಾನೆ ಇಬ್ಬರು ಇಲ್ಲದೆ ಆಡಿದ್ದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದರು. ಈ ಮೂರು ಕಾರಣದಿಂದಾಗಿ ಭಾರತ ಹಾಗೂ ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭ ಆಗುತ್ತಿರುವ ಟೆಸ್ಟ್ ಪಂದ್ಯ ವಿಶೇಷ ಎನಿಸಿದೆ.
ಪಾಕಿಸ್ತಾನ್-ಆಸ್ಟ್ರೇಲಿಯಾಕ್ಕೆ ಐತಿಹಾಸಿಕ ಟೆಸ್ಟ್
ವಿಶ್ವ ಕ್ರಿಕೆಟ್ನ ಬಲಾಢ್ಯ ತಂಡಗಳಾದ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯ ಕೂಡ ಇಂದಿನಿಂದ ಆರಂಭವಾಗುತ್ತಿದೆ. 24 ವರ್ಷದ ಬಳಿಕ ಎರಡು ತಂಡಗಳು ಪಾಕಿಸ್ತಾನ್ ನೆಲದಲ್ಲಿ ಟೆಸ್ಟ್ ಪಂದ್ಯ ಆಡುತ್ತಿರುವುದರಿಂದ ಉಭಯ ತಂಡಗಳಿಗೂ ಈ ಪಂದ್ಯ ಸ್ಪೆಷಲ್ ಎನಿಸಿದೆ. ಕಳೆದ ಬಾರಿ 1988ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದು ಬೀಗಿತ್ತು.
ಮಹಿಳೆಯರ ವಿಶ್ವಕಪ್ 2022 ಆರಂಭ
ಮಹಿಳಾ ಕ್ರಿಕೆಟ್ ಪಾಲಿಗೂ ಮಾ.4 ಸದಾ ನೆನಪಿನಲ್ಲಿರುವ ದಿನವಾಗಲಿದ್ದು, ನಾಲ್ಕು ವರ್ಷದ ಬಳಿಕ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅಭಿಯಾನ ಇಂದಿನಿಂದ ಶುರುವಾಗಲಿದೆ. ನ್ಯೂಜಿ಼ಲೆಂಡ್ನ ಮೌಂಟ್ಮೌಂಗನ್ಯುಯಿ ಅಂಗಳದಲ್ಲಿ ನಡೆಯಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ನ್ಯೂಜಿ಼ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ. ವಿಶ್ವಕಪ್ ಪಂದ್ಯಾವಳಿ ಕಿವೀಸ್ ಅಂಗಳದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ್ಯೂಜಿ಼ಲೆಂಡ್ ಪ್ರಶಸ್ತಿ ಗೆಲ್ಲುವ ಫೇವರೆಟ್ ಎನಿಸಿದ್ದರೂ, ಭಾರತ ಕೂಡ ಪ್ರಶಸ್ತಿ ಗೆಲುವಿನ ಕನಸಿನೊಂದಿಗೆ ಅಖಾಡಕ್ಕಿಳಿಯಲಿದೆ.