Srilanka – Suraj Randiv – ಕುತಂತ್ರದಿಂದ ಸೆಹ್ವಾಗ್ ಶತಕ ತಪ್ಪಿಸಿದ್ದ ಆ ಸ್ಪಿನ್ನರ್ ಈಗ ಬಸ್ ಚಾಲಕ..!

ನೆನಪಿರಬಹುದು… ಇಲ್ಲ ಅಂದ್ರೂ ಒಂದು ಸಲ ನೆನಪು ಮಾಡುತ್ತೇವೆ. ಅದು 2010ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ತ್ರಿಕೋನ ಏಕದಿನ ಸರಣಿ. ಶ್ರೀಲಂಕಾ ವಿರುದ್ಧ ಭಾರತಕ್ಕೆ ಗೆಲ್ಲಲು ಒಂದು ರನ್ ಬೇಕಿತ್ತು. ಆಗಲೇ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮೆನ್ ವೀರೇಂದ್ರ ಸೆಹ್ವಾಗ್ ಅಜೇಯ 99 ರನ್ ಗಳಿಸಿದ್ದರು. ಗೆಲ್ಲಲು ಒಂದು ರನ್ ಬೇಕು. ಸೆಹ್ವಾಗ್ ಸೆಂಚೂರಿಗೂ ಒಂದು ರನ್ ಬೇಕು.

ಆದ್ರೆ ಎದುರಾಳಿ ಲಂಕಾ ತಂಡದ ಸ್ಪಿನ್ ಬೌಲರ್ ಮಾಡಿದ್ದೇ ಬೇರೊಂದು ಕಿತಾಪತಿ. ವೈಡ್ ಬಾಲ್ ಎಸೆದು ಟೀಮ್ ಇಂಡಿಯಾದ ಗೆಲುವಿಗೆ ಕಾರಣರಾದ್ರು. ಆದ್ರೆ ಸೆಹ್ವಾಗ್ ಶತಕವನ್ನು ತಪ್ಪಿಸಿದ್ದರು. ಆಗ ಇದು ಬಹಳಷ್ಟು ಟೀಕೆಗೂ ಗುರಿಯಾಗಿತ್ತು.

ಅಂದ ಹಾಗೇ ಆ ಸ್ಪಿನ್ನರ್ ಬೇರೆ ಯಾರು ಅಲ್ಲ. ಸೂರಜ್ ರಂದೀವ್.
ಹೌದು, ಆಗ ಸೂರಜ್ ರಂದೀವ್ ಲಂಕಾದ ಸ್ಟಾರ್ ಬೌಲರ್ ಆಗಿದ್ದರು. 2011ರ ವಿಶ್ವಕಪ್ ಫೈನಲ್ ನಲ್ಲೂ ಆಡಿದ್ದರು. ಅಷ್ಟೇ ಅಲ್ಲ, ವಿಶ್ವದ ಶ್ರೇಷ್ಠ ಬ್ಯಾಟರ್ ಗಳಿಗೂ ತನ್ನ ವಿಭಿನ್ನ ಬೌಲಿಂಗ್ ಮೂಲಕ ತೊಂದರೆಯನ್ನುಂಟು ಮಾಡಿದ್ದ ಆಟಗಾರ ಸೂರಜ್ ರಂದ್ವೀವ್ 2016ರ ನಂತರ ಲಂಕಾ ತಂಡದಿಂದ ದೂರವೇ ಉಳಿದುಕೊಂಡಿದ್ದರು.

2009ರಿಂದ 2016ರವರೆಗೆ ಲಂಕಾ ತಂಡದ ಪರ ಆಡಿದ್ದ ಸೂರಜ್ ರಂದೀವ್ 12 ಟೆಸ್ಟ್ ಪಂದ್ಯಗಳಲ್ಲಿ 43 ವಿಕೆಟ್, 31 ಏಕದಿನ ಪಂದ್ಯಗಳಲ್ಲಿ 36 ವಿಕೆಟ್ ಹಾಗೂ 17 ಟಿ-20 ಪಂದ್ಯಗಳಲ್ಲಿ ಏಳು ವಿಕೆಟ್ ಉರುಳಿಸಿದ್ದರು.

ಹಾಗೇ 2011ರಲ್ಲಿ ಸೂರಜ್ ರಂದೀವ್ ಅವರು ಐಪಿಎಲ್ ನಲ್ಲಿ ಧೋನಿ ಸಾರಥ್ಯದ ಸಿಎಸ್ ಕೆ ತಂಡದ ಪರ ಎಂಟು ಪಂದ್ಯಗಳಲ್ಲಿ ಆರು ವಿಕೆಟ್ ಗಳನ್ನು ಪಡೆದುಕೊಂಡಿದ್ದರು.
ಆದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದ ನಂತರ ಸೂರಜ್ ರಂದೀವ್ ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊನೆಗೆ ಆಸ್ಟ್ರೇಲಿಯಾದಲ್ಲಿ ಚಾಲಕನಾಗಿ ಜೀವನ ಸಾಗಿಸುತ್ತಿದ್ದಾರೆ.

ಅದೃಷ್ಟ ಮತ್ತು ದುರಾದೃಷ್ಟ ಹೇಗಿರುತ್ತೆ ನೋಡಿ. ವಿಧಿಯಾಟದ ಮುಂದೆ ಎಲ್ಲವೂ ನಗಣ್ಯ. ಕೆಲವೊಂದು ಬಾರಿ ಯಶಸ್ಸಿನ ಉತ್ತುಂಗಕ್ಕೇರುತ್ತಾರೆ. ಅದೇ ರೀತಿ ಪಾತಾಳಕ್ಕೂ ಕುಸಿದು ಕೂಡ ಬೀಳುತ್ತಾರೆ. ಹಾವು ಏಣಿನ ಆಟದಂತಿರುವ ಜೀವನದಲ್ಲಿ ಏನೇ ಬಂದ್ರೂ ಸಹಿಸಿಕೊಂಡು ಮುನ್ನಡೆಯಬೇಕು. ಸೂರಜ್ ರಂದೀವ್ ಕೂಡ ಈಗ ಮಾಡುತ್ತಿರುವುದು ಅದನ್ನೇ..