Srilanka cricket – ಅಧಃಪತನದ ಹಾದಿಯಲ್ಲಿ ಶ್ರೀಲಂಕಾ ಕ್ರಿಕೆಟ್… ಗತ ಕಾಲದ ವೈಭವ ನೆನಪು ಮಾಡಿಕೊಂಡಾಗ…!

ಶ್ರೀಲಂಕಾ.. ಸಣ್ಣ ದ್ವೀಪ ರಾಷ್ಟ್ರ. ಇತಿಹಾಸದ ಪ್ರಕಾರ ರಾವಣನ ದೇಶ. ಆನಂತರ ಅನೇಕ ರಾಜ – ಮಹಾರಾಜರು ಶ್ರೀಲಂಕಾವನ್ನು ಆಳಿದ್ದಾರೆ. ಸಿಂಹಳಿಯರ ದೇಶವಾಗಿದ್ರೂ ಅಲ್ಲಿ ಬೌದ್ಧ ಧರ್ಮದ ಪರಿಪಾಲಕರು. ಬುದ್ಧನ ಸಂದೇಶಗಳನ್ನು ಸಾರುವ ಅನೇಕ ಐತಿಹಾಸಿಕ ದೇವಾಲಯಗಳಿವೆ.
ಹಾಗೇ ನೋಡಿದ್ರೆ ಭಾರತದ ಸಂಸ್ಕøತಿ ಮತ್ತು ಲಂಕಾದ ಸಂಸ್ಕøತಿಯ ನಡುವೆ ಜಾಸ್ತಿ ವ್ಯತ್ಯಾಸಗಳಿಲ್ಲ. ಅದರಲ್ಲೂ ತಮಿಳು ಮೂಲದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದು ಎಲ್ಲವೂ ಇತಿಹಾಸ.
ಅಂದ ಹಾಗೇ, ಶ್ರೀಲಂಕಾದಲ್ಲೂ ಕ್ರಿಕೆಟ್ ಆಟವನ್ನು ತುಂಬಾ ಇಷ್ಟಪಡುತ್ತಾರೆ. ಭಾರತದಲ್ಲಿ ಕ್ರಿಕೆಟ್ ಆಟಗಾರರನ್ನು ಆರಾಧಿಸುವ ಹಾಗೇ ಶ್ರೀಲಂಕಾ ಆಟಗಾರರನ್ನು ಅಲ್ಲಿನ ಜನ ಆರಾಧಿಸುತ್ತಾರೆ. ಪ್ರೀತಿಸುತ್ತಾರೆ.
ನೆನಪಿಡಿ, ಶ್ರೀಲಂಕಾ ಚಿಕ್ಕ ರಾಷ್ಟ್ರವಾದ್ರೂ ವಿಶ್ವ ಕ್ರಿಕೆಟ್ ನಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದೆ. ಹಲವು ದಾಖಲೆಗಳು ಲಂಕಾ ಕ್ರಿಕೆಟಿಗರ ಹೆಸರಿನಲ್ಲಿದೆ. ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಇರೋದು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿ.
ಇನ್ನು, 1996ರ ವಿಶ್ವಕಪ್ ಗೆದ್ದ ನಂತರ ಲಂಕಾ ಕ್ರಿಕೆಟ್ ಗೆ ಹೊಸ ಸ್ಫೂರ್ತಿಯನ್ನು ನೀಡಿತ್ತು. 1983ರ ವಿಶ್ವಕಪ್ ಗೆದ್ದ ನಂತರ ಭಾರತದಲ್ಲಿ ಯಾವ ರೀತಿ ಕ್ರಿಕೆಟ್ ಆಟ ಸಂಚಲನವನ್ನು ಸೃಷ್ಟಿಸಿತ್ತೋ ಅದೇ ಲಂಕಾದಲ್ಲಿ ಕೂಡ 1996ರ ವಿಶ್ವಕಪ್ ಗೆದ್ದ ನಂತರ ಕ್ರಿಕೆಟ್ ಆಟ ಇನ್ನಷ್ಟೂ ಚಾಲ್ತಿಗೆ ಬಂತು.

ಒಂದು ಬಾರಿ ಹಳೆಯ ಲಂಕಾ ತಂಡವನ್ನು ನೆನಪು ಮಾಡಿಕೊಳ್ಳಿ. ಸನತ್ ಜಯಸೂರ್ಯ, ರಮೇಶ್ ಕಲುವಿತರಣ ಸ್ಪೋಟಕ ಆರಂಭಿಕರು. ಏಕದಿನ ಕ್ರಿಕೆಟ್ ಗೆ ಹೊಸ ಆಯಾಮವನ್ನು ನೀಡಿದ್ದ ಆಟಗಾರರು. 1996ರ ವಿಶ್ವಕಪ್ ನಲ್ಲಿ ಮೊದಲ 15 ಓವರ್ ಗಳಲ್ಲಿ ಹೊಡಿಬಡಿ ಆಟದ ಮೂಲಕವೇ ರನ್ ಗಳಿಸುವುದು ಹೇಗೆ ಎಂಬುದನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದವರು ಸನತ್ ಜಯಸೂರ್ಯ ಮತ್ತು ರಮೇಶ್ ಕಲುವಿತರಣ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಸಂಕಾ ಗುರುಸಿಂಹ, ಅರವಿಂದ ಡಿಸಿಲ್ವಾ, ನಾಯಕ ಅರ್ಜುನ್ ರಣತುಂಗಾ, ರೋಶನ್ ಮಹಾನಾಮ, ಹಸನ್ ತಿಲಕ್ ರತ್ನೆ, ಸ್ಪಿನ್ನರ್ ಗಳಾದ ಮುತ್ತಯ್ಯ ಮುರಳೀಧರನ್, ಕುಮಾರ ಧರ್ಮಸೇನಾ, ವೇಗಿ ಚಾಮಿಂಡಾ ವಾಸು. ಅಬ್ಬಾ ಶ್ರೀಲಂಕಾ ತಂಡದಲ್ಲಿ ಈ ಹೆಸರುಗಳನ್ನು ಕೇಳಿದಾಗಲೇ ಎದುರಾಳಿ ತಂಡಗಳು ಹಗುರವಾಗಿ ಪರಿಗಣಿಸುವ ಸಾಧ್ಯತೆಗಳೇ ಇರಲಿಲ್ಲ.
ಯಾಕಂದ್ರೆ ಲಂಕಾ ತಂಡ ಅಷ್ಟೊಂದು ಬಲಿಷ್ಠವಾಗಿತ್ತು. ಯಾವತ್ತೂ ಕೂಡ ಒಬ್ಬ ಆಟಗಾರರನ್ನು ನೆಚ್ಚಿಕೊಳ್ಳುತ್ತಿರಲಿಲ್ಲ. ಆಲ್ ರೌಂಡರ್ ಆಗಿದ್ದ ಸನತ್ ಜಯಸೂರ್ಯ ಅವರ ಬ್ಯಾಟ್ ನಿಂದ ಬರುತ್ತಿದ್ದ ರನ್ ಗಳು ತಂಡಕ್ಕೆ ಬೋನಸ್. ಹಾಗೇ ವಿಕೆಟ್ ಕೀಪರ್ ರಮೇಶ್ ಕಲುವಿತರಣ ಗಳಿಸುತ್ತಿದ್ದ ರನ್ ಗಳು ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್. ಮದ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಮಾತ್ರ ಎದುರಾಳಿ ಬೌಲರ್ ಗಳನ್ನು ಮನಬಂದಂತೆ ಕಾಡಿಸುತ್ತಿದ್ದರು. ಅಷ್ಟರ ಮಟ್ಟಿಗೆ ಲಂಕಾ ತಂಡ ಬಲಿಷ್ಠವಾಗಿತ್ತು. Srilanka cricket -Will Sri Lankan cricket ever be the same as their past glory days?

ಆನಂತರ ಲಂಕಾ ತಂಡದಲ್ಲಿ ಶುರುವಾಗಿದ್ದು ಮಹೇಲಾ ಜಯವರ್ಧನೆ, ಕುಮಾರ ಸಂಗಕ್ಕರ, ಅಟಪಟ್ಟು, ದಿಲ್ಶಾನ್, ಅಜಂತಾ ಮೆಂಡೀಸ್, ಲಸಿತ್ ಮಾಲಿಂಗಾ, ಆಂಜಲೋ ಮ್ಯಾಥ್ಯೂಸ್ ನಂತಹ ಆಟಗಾರರು ಲಂಕಾ ತಂಡವನ್ನು ಯಶಸ್ವಿನ ಉತ್ತುಂಗಕ್ಕೇರಿಸಿದ್ದರು. ಅದರಲ್ಲೂ ಮಹೇಲಾ ಜಯವರ್ಧನೆ ಮತ್ತು ಕುಮಾರ ಸಂಗಕ್ಕರ ಜೋಡಿಯಂತೂ ಎದುರಾಳಿ ಬೌಲರ್ ಗಳನ್ನು ಕಾಡಿದ್ದ ಪರಿಯನ್ನು ಜೀವನಪರ್ಯಂತ ನೆನಪಿಸಿಕೊಳ್ಳಬೇಕು.
ಆದ್ರೆ ಸಂಗಕ್ಕರ ಮತ್ತು ಜಯವರ್ಧನೆ ನೈಪಥ್ಯಕ್ಕೆ ಸರಿದ ನಂತರ ಲಂಕಾ ತಂಡ ಸೊರಗಿ ಹೋಗಿದೆ. ಅದ್ಭುತ ಪ್ರತಿಭಾವಂತ ಆಟಗಾರರು ಇದ್ರೂ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡುತ್ತಿಲ್ಲ. ಸಾಲು ಸಾಲು ಸೋಲುಗಳು ಒಂದು ಕಡೆಯಾದ್ರೆ ತಂಡವನ್ನು ಮುನ್ನಡೆಸುವ ನಾಯಕನ ಕೊರತೆಯೂ ಲಂಕಾ ತಂಡಕ್ಕಿದೆ.

ಹಾಗಿದ್ರೆ ಇದಕ್ಕೆ ಕಾರಣ ಏನು ? ಮುಖ್ಯವಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆಡಳಿತ ವ್ಯವಸ್ಥೆ. ಜೊತೆಗೆ ಶ್ರೀಲಂಕಾ ಸರ್ಕಾರ ಕ್ರಿಕೆಟ್ ಮಂಡಳಿಯ ಆಯ್ಕೆಯಲ್ಲೂ ಹಸ್ತಕ್ಷೇಪ ಮಾಡುತ್ತಿದೆ. ಇನ್ನೊಂದೆಡೆ ಆರ್ಥಿಕ ಸಮಸ್ಯೆ. ಹೀಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಲಂಕಾ ತಂಡ ತನ್ನ ಗತ ಕಾಲದ ವೈಭವವನ್ನು ಕಳೆದುಕೊಳ್ಳುತ್ತಿದೆ.
ಇನ್ನು ಮಾಜಿ ಆಟಗಾರರು ಕೂಡ ಲಂಕಾ ಕ್ರಿಕೆಟ್ ಮಂಡಳಿಯ ಜೊತೆಗೆ ಕೈ ಜೋಡಿಸುತ್ತಿಲ್ಲ. ಒಂದು ವೇಳೆ ಲಂಕಾ ಕ್ರಿಕೆಟ್ ಅಭಿವೃದ್ದಿಗಾಗಿ ಕೈ ಜೋಡಿಸಿದ್ರೂ ಆಂತರಿಕ ಕಚ್ಛಾಟದಿಂದಾಗಿ ಹಿಂದೆ ಸರಿಯುತ್ತಿದ್ದಾರೆ.
ಹೀಗಾಗಿ ಶ್ರೀಲಂಕಾ ತಂಡ ವೆಸ್ಟ್ ಇಂಡೀಸ್ ಕ್ರಿಕೆಟ್ ನ ಹಾದಿಯನ್ನು ಹಿಡಿಯುತ್ತಿದೆ. ವೆಸ್ಟ್ ಇಂಡೀಸ್ ತಂಡದಲ್ಲಿ ವಿಶ್ವದ ಗಮನ ಸೆಳೆಯುಂತಹ ಆಟಗಾರರು ಇದ್ದಾರೆ. ಆದ್ರೆ ಸದ್ಯದ ಲಂಕಾ ತಂಡದಲ್ಲಿ ಅಂತಹ ಆಟಗಾರರು ತುಂಬಾನೇ ವಿರಳ.
ಒಟ್ಟಿನಲ್ಲಿ ಶ್ರೀಲಂಕಾ ಕ್ರಿಕೆಟ್ ಅಧಃಪತನದ ಹಾದಿಯಲ್ಲಿದೆ. ಆಂತರಿಕ ಜಗಳವನ್ನು ಬದಿಗಿಟ್ಟು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಬಲಿಷ್ಠ ತಂಡವನ್ನು ಕಟ್ಟುವತ್ತ ದಿಟ್ಟ ಹೆಜ್ಜೆಯನ್ನಿಡಬೇಕಾದ ಅನಿವಾರ್ಯತೆ ಇದೆ.