ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಫೈಟ್ನಲ್ಲಿ ಬಾಂಗ್ಲಾದೇಶ(Bangladesh) ವಿರುದ್ಧ 2 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ಶ್ರೀಲಂಕಾ(Sri Lanka), ಏಷ್ಯಾ ಕಪ್-2022 (ASIA CUP 2022) ಟೂರ್ನಿಯ ಸೂಪರ್-4(Super-4) ಹಂತಕ್ಕೆ ಭರ್ಜರಿ ಎಂಟ್ರಿಕೊಟ್ಟಿದೆ. ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 7 ವಿಕೆಟ್ಗೆ 183 ರನ್ಗಳ ಭರ್ಜರಿ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ, 19.2 ಓವರ್ಗಳಲ್ಲಿ 8 ವಿಕೆಟ್ಗೆ 184 ರನ್ಗಳಿಸುವ ಮೂಲಕ 2 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
ಬಾಂಗ್ಲಾ ಸವಾಲಿನ ಮೊತ್ತ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾದೇಶ, ಆರಂಭದಲ್ಲೇ ಶಬ್ಬೀರ್(5) ವಿಕೆಟ್ ಕಳೆದುಕೊಂಡಿತು. ನಂತರ ಒಂದಾದ ಮೆಹದಿ ಹಸನ್(38) ಹಾಗೂ ನಾಯಕ ಶಕೀಬ್ ಅಲ್ ಹಸನ್(24) ಅಲ್ಪ ಮೊತ್ತದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಅನುಭವಿ ಆಟಗಾರ ಮುಶ್ಫಿಕರ್ ರಹೀಮ್(4) ಬಹುಬೇಗನೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಅಫೀಫ್ ಹೊಸೈನ್(39) ಉತ್ತಮ ಆಟವಾಡಿದರೆ. ಮಹಮ್ಮದುಲ್ಲಾ(27) ಹಾಗೂ ಮೊಸದಿಕ್ ಹೊಸೈನ್(24) ಉಪಯುಕ್ತ ರನ್ಗಳಿಸಿ ತಂಡಕ್ಕೆ ಆಸರೆಯಾದರು. ಇದರ ಪರಿಣಾಮ ಬಾಂಗ್ಲಾದೇಶ 20 ಓವರ್ಗಳಲ್ಲಿ 7 ವಿಕೆಟ್ಗೆ 183 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಲಂಕಾ ಪರ ಹಸರಂಗ ಹಾಗೂ ಕರುಣಾರತ್ನೆ 2 ವಿಕೆಟ್ ಪಡೆದರು.
ಲಂಕಾಗೆ ಮೆಂಡಿಸ್-ಶನಕ ಆಸರೆ:
ಬಾಂಗ್ಲಾದೇಶ ನೀಡಿದ 184 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾಕ್ಕೆ ಕುಸಲ್ ಮೆಂಡಿಸ್(Kusal Mendis) (60) ಹಾಗೂ ನಾಯಕ ದಸುನ್ ಶನಕ(45) ಗೆಲುವಿನ ಹೀರೋಗಳಾಗಿ ಮಿಂಚಿದರು. ಆರಂಭಿಕನಾಗಿ ಕಣಕ್ಕಿಳಿದ ಕುಸಲ್ ಮೆಂಡಿಸ್, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರೆ. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ದಸುನ್ ಶನಕ, 45 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಅಸಿತ ಫೆರ್ನಾಂಡೋ 3 ಬಾಲ್ಗಳಲ್ಲಿ 10 ರನ್ ಸಿಡಿಸಿ ತಂಡಕ್ಕೆ 2 ವಿಕೆಟ್ಗಳ ರೋಚಕ ಗೆಲುವು ತಂದುಕೊಟ್ಟರು. ಬಾಂಗ್ಲಾ ಪರ ಎಬದೂತ್ ಹೊಸೈನ್ 3, ಟಸ್ಕಿನ್ ಅಹ್ಮೆದ್ 2 ವಿಕೆಟ್ ಪಡೆದರು. ಬಾಂಗ್ಲಾ ವಿರುದ್ಧ ದೊರೆತ ಗೆಲುವಿನೊಂದಿಗೆ ಶ್ರೀಲಂಕಾ, ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತಕ್ಕೇರಿದರೆ. ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿತು.