ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಐಪಿಎಲ್ ಸೀಸನ್ 15ರ ಆರಂಭಕ್ಕೂ ಮುನ್ನವೇ ಸಣ್ಣ ಆತಂಕವಿದೆ. ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ ಈಗ ಮಾಜಿ ಕ್ಯಾಪ್ಟನ್. ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಎಬಿಡಿ ವಿಲಿಯರ್ಸ್ ಐಪಿಎಲ್ಗೂ ಗುಡ್ ಬೈ ಹೇಳಿದ್ದಾರೆ. ಹೊಸ ಆಟಗಾರರು ಯಾರು ಬರ್ತಾರೋ..? ಬಂದ್ರೆ ಅವರೇನು ಮಾಡ್ತಾರೆ ಅನ್ನುವ ಆತಂಕವಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ.
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ನಲ್ಲಿ ಬ್ರೆವಿಸ್ದೇ ಮಾತು. ಥೇಟ್ ಎಬಿಡಿ ವಿಲಿಯರ್ಸ್ ರನ್ನೇ ಹೋಲುವ ಶೈಲಿ. ಸ್ಟ್ರೈಟ್ ಡ್ರೈವ್, ಕವರ್ ಡ್ರೈವ್, ಪುಲ್ ಶಾಟ್ ಹೀಗೆ ಕ್ರಿಕೆಟ್ನ ಎಲ್ಲಾ ಪಾಠಗಳು ಈತನಿಗೆ ಸಲೀಸು. ಜೊತೆಗೆ ಮೈದಾನದ 360 ಡಿಗ್ರಿಯಲ್ಲೂ ಆಡಲುವ ಕಲೆ ಕರಗತ. ಎಬಿಡಿ ವಿಲಿಯರ್ಸ್ ಅವರಂತೆಯೇ ಭಯವಿಲ್ಲದ ಬ್ಯಾಟಿಂಗ್. ಅಷ್ಟೇ ಉತ್ತಮ ಫೀಲ್ಡರ್. ಫಿನಿಷರ್ ಎಲ್ಲವೂ. ಹೀಗಾಗಿ ಎಬಿಡಿಯ ಜಾಗಕ್ಕೆ ಜೂನಿಯರ್ ಎಬಿಡಿಯನ್ನು ಕರೆತರಲು ಆರ್ಸಿಬಿ ಎಲ್ಲಾ ಪ್ಲಾನ್ಗಳನ್ನು ಮಾಡುತ್ತಿದೆ.
ಅಂಡರ್ 19 ವಿಶ್ವಕಪ್ನಲ್ಲಿ ಬೇಬಿ ಎಬಿಡಿ ಎಂದೇ ಫೇಮಸ್ ಆಗಿರುವ ಬ್ರೆವಿಸ್ ಬೌಲರ್ಗಳ ಬೆವರಿಳಿಸಿದ್ದಾರೆ. ಸ್ವೀಪ್, ರಿವರ್ಸ್ ಸ್ವೀಪ್ ಜೊತೆಗೆ ರಿವರ್ಸ್ ಲ್ಯಾಪ್ ಶಾಟ್ಗಳು ಥೇಟ್ ಎಬಿಡಿಯೇ ಮೈದಾನದಲ್ಲಿ ಆಡುತ್ತಿದ್ದಾರೆ ಅನ್ನೋ ಫೀಲ್ ಕೊಟ್ಟಿತ್ತು. ಎಬಿಡಿ ಅಭಿಮಾನಿಯಾಗಿರುವ ಬ್ರೆವಿಸ್, ಅವರ ಬ್ಯಾಟಿಂಗ್ ಶೈಲಿಯನ್ನೇ ಕಾಪಿ ಮಾಡಿ ಬಟ್ಟಿ ಇಳಿಸಿದ್ದಾರೆ. ಎಬಿಡಿಯ ಜೆರ್ಸಿ ನಂಬರ್ 17 ಅನ್ನೇ ಧರಿಸಿ ಬ್ರೆವಿಸ್ ಕೂಡ ಕಣಕ್ಕಿಳಿಯುತ್ತಿದ್ದಾರೆ. ದಕ್ಷಿಣ ಆಪ್ರಿಕಾದಲ್ಲೆಲ್ಲಾ ಎಬಿಡಿಯ ಉತ್ತರಾಧಿಕಾರಿ ಎಂದೇ ಬ್ರೆವಿಸ್ ಕರೆಸಿಕೊಳ್ಳುತ್ತಿದ್ದಾರೆ.
