ಕೇಶವ್ ಮಹಾರಾಜ್(7/32) ಹಾಗೂ ಸಿಮೊನ್ ಹಾರ್ಮರ್(3/21) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಕೇವಲ 53 ರನ್ಗಳಿಗೆ ಆಲೌಟ್ ಆಗುವ ಮೂಲಕ 220 ರನ್ಗಳ ಹೀನಾಯ ಸೋಲನುಭವಿಸಿತು.
ಡರ್ಬನ್ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 274 ರನ್ಗಳ ಸವಾಲು ಎದುರಿಸಿದ ಬಾಂಗ್ಲಾದೇಶ, ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿತು. ಪರಿಣಾಮ 53 ರನ್ಗಳಿಗೆ ಸರ್ವಪತನ ಕಂಡ ಬಾಂಗ್ಲಾದೇಶ 220 ರನ್ಗಳ ಭಾರೀ ಅಂತರದ ಸೋಲು ಕಂಡಿತು. ಆ ಮೂಲಕ ಅತಿಥೇಯ ಸೌತ್ ಆಫ್ರಿಕಾ ತಂಡ ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಕೇಶವ್ ಮಹಾರಾಜ್(7/32) ವಿಕೆಟ್ ಪಡೆದು ಮಿಂಚಿದರೆ, ಇವರಿಗೆ ಸಾಥ್ ನೀಡಿದ ಸಿಮೊನ್ ಹಾರ್ಮರ್(3/21) ತಂಡದ ಗೆಲುವಿಗೆ ಕಾರಣರಾದರು.
ಪಂದ್ಯದ ಕೊನೆಯ ದಿನದಂದು 11/3 ರನ್ಗಳಿಂದ ದಿನದಾಟ ಆರಂಭಿಸಿದ ಬಾಂಗ್ಲಾದೇಶ ದಿನದಾಟದ ಆರಂಭದಿಂದಲೇ ಸೌತ್ ಆಫ್ರಿಕಾ ಬೌಲಿಂಗ್ ದಾಳಿಗೆ ತತ್ತರಿಸಿತು. ಕೇವಲ 42 ರನ್ಗಳಿಗೆ 7 ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶದ ಪರ ನಜೀಮುಲ್ ಹೊಸೈನ್(26) ಹಾಗೂ ಟಸ್ಕಿನ್ ಅಹ್ಮೆದ್(14) ಎರಡಂಕ್ಕಿತ ಮೊತ್ತ ಕಲೆಹಾಕಿದರು. ಉಳಿದಂತೆ ಬಾಂಗ್ಲಾದೇಶದ ಪ್ರತಿಯೊಬ್ಬ ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳಾದ ಮಹಾರಾಜ್ ಹಾಗೂ ಹಾರ್ಮರ್ ದಾಳಿಗೆ ತತ್ತರಿಸಿದರು.
ಬಾಂಗ್ಲಾದೇಶದ ಪರ ಆರಂಭಿಕರಾಗಿ ಕಣಕ್ಕಿಳಿದ ಮಹಮದುಲ್ ಹಸನ್(4), ಶದ್ಮನ್ ಇಸ್ಲಾಂ(0), ಮೊಮುನಿಲ್ ಹಕ್(2), ಮುಷ್ಫಿಕರ್ ರಹೀಮ್(0), ಲಿಟನ್ ದಾಸ್(2), ಯಾಸಿರ್ ಅಲಿ(5), ಮೆಹದಿ ಹಸನ್(0), ಖಲೀದ್ ಅಹ್ಮೆದ್(0), ಎಬ್ದೂತ್ ಹೊಸೈನ್(0) ಯಾವುದೇ ಬ್ಯಾಟ್ಸ್ಮನ್ಗಳು ತಂಡಕ್ಕೆ ಆಸರೆಯಾಗಲಿಲ್ಲ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸೌತ್ ಆಫ್ರಿಕಾ ಗೆಲುವಿಗೆ ಕಾರಣನಾದ ಕೇಶವ್ ಮಹಾರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಏಪ್ರಿಲ್ 7ರಿಂದ 11ರವರೆಗೆ ಪೋರ್ಟ್ ಎಲಿಜೆಬತ್ನಲ್ಲಿ ನಡೆಯಲಿದೆ.
*ಸಂಕ್ಷಿಪ್ತ ಸ್ಕೋರ್:*
ಸೌತ್ ಆಫ್ರಿಕಾ – 367 ಮತ್ತು 204
ಬಾಂಗ್ಲಾದೇಶ – 298 ಮತ್ತು 53