South Africa T20 league – ಜೋಹಾನ್ಸ್ ಬರ್ಗ್ ಫ್ರಾಂಚೈಸಿಯನ್ನೇ ಸಿಎಸ್ ಕೆ ಖರೀದಿ ಮಾಡಿದ್ದು ಇದೇ ಕಾರಣಕ್ಕೆ..!

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಯು ಸೌತ್ ಆಫ್ರಿಕಾ ಟಿ-20 ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಜೋಹಾನ್ಸ್ ಬರ್ಗ್ ಫ್ರಾಂಚೈಸಿಯನ್ನು ಖರೀದಿ ಮಾಡಲು ಯಶಸ್ವಿಯಾಗಿದೆ.
ಹಾಗೇ ನೋಡಿದ್ರೆ ಸೌತ್ ಆಫ್ರಿಕಾ ಟಿ-20 ಕ್ರಿಕೆಟ್ ಲೀಗ್ ಐಪಿಎಲ್ ಟೂರ್ನಿಯ ಇನ್ನೊಂದು ಮುಖವಾಡ. ಯಾಕಂದ್ರೆ ಸೌತ್ ಆಫ್ರಿಕಾ ಟಿ-20 ಲೀಗ್ ನಲ್ಲಿ ಭಾಗವಹಿಸುವ ಆರು ತಂಡಗಳನ್ನು ಖರೀದಿ ಮಾಡಿರುವುದು ಐಪಿಎಲ್ ಫ್ರಾಂಚೈಸಿ ಮಾಲೀಕರು. ಮುಂಬಯ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ತಾನ ರಾಯಲ್ಸ್, ಸನ್ ರೈಸರ್ಸ್ ಹೈದ್ರಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮಾಲೀಕರೇ ಖರೀದಿ ಮಾಡಿದ್ದಾರೆ.

ಅಂದ ಹಾಗೇ ಚೆನ್ನೈ ಸೂಪರ್ ಕಿಂಗ್ಸ್ ಜೋಹಾನ್ಸ್ ಬರ್ಗ್ ಫ್ರಾಂಚೈಸಿಯನ್ನೇ ಖರೀದಿ ಮಾಡಿದ್ದು ಯಾಕೆ ? ಈ ಪ್ರಶ್ನೆಗೆ ಉತ್ತರ ತುಂಬಾ ಸಿಂಪಲ್ ಆಗಿದೆ.
ಹೌದು, ಜೋಹಾನ್ಸ್ ಬರ್ಗ್‍ನ ವಾಂಡೆರರ್ರ್ಸ್ ಮೈದಾನಕ್ಕೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಿಂಗ್ ಮೇಕರ್ ಮಹೇಂದ್ರ ಸಿಂಗ್ ಧೋನಿಗೂ ಅವಿನಾಭಾವ ಸಂಬಂಧವಿದೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ಗೂ ಅದೃಷ್ಟದ ತಾಣ.
ನೆನಪಿದೆಯಾ.. 2007ರ ಚೊಚ್ಚಲ ಟಿ-20 ವಿಶ್ವಕಪ್ ಫೈನಲ್ ಪಂದ್ಯ. ಫೈನಲ್ ನಲ್ಲಿ ಪಾಕ್ ತಂಡವನ್ನು ಮಣಿಸಿದ್ದ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಟ್ರೋಫಿ ಗೆದ್ದು ಸಂಭ್ರಮಿಸಿದ್ದು ಇದೇ ಜೋಹಾನ್ಸ್ ಬರ್ಗ್‍ನ ವಾಂಡರೆರ್ರ್ಸ್ ಮೈದಾನದಲ್ಲೇ.
2010ರಲ್ಲಿ ನಡೆದಿದ್ದ ಚಾಂಪಿಯನ್ಸ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಯಲ್ಲೂ ಧೋನಿ ನಾಯಕತ್ವದ ಸಿಎಸ್ ಕೆ ತಂಡ ಜೋಹಾನ್ಸ್ ಬರ್ಗ್ ನ ವಾಂಡೆರರ್ರ್ಸ್ ಮೈದಾನದಲ್ಲಿ ಪ್ರಶಸ್ತಿ ಗೆದ್ದು ಬೀಗಿತ್ತು.

ಹೀಗಾಗಿ ಧೋನಿ ಮತ್ತು ಸಿಎಸ್ ಕೆ ತಂಡಕ್ಕೆ ಜೋಹಾನ್ಸ್ ಬರ್ಗ್ ನೆಚ್ಚಿನ ತಾಣವಾಗಿದೆ. ಬಹುಶಃ ಈ ಕಾರಣದಿಂದಲೇ ಸಿಎಸ್ ಕೆ ಜೋಹಾನ್ಸ್ ಬರ್ಗ್ ಫ್ರಾಂಚೈಸಿಯನ್ನು ಖರೀದಿ ಮಾಡಿದೆ ಅಂತನೂ ಹೇಳಬಹುದು.
ಈಗಾಗಲೇ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ನಾಲ್ಕು ಬಾರಿ ಚಾಂಪಿಯನ್ ಹಾಗೂ ಐದು ಬಾರಿ ರನ್ನರ್ ಅಪ್ ಗೆದ್ದ ಹೆಗ್ಗಳಿಕೆ ಧೋನಿಯ ಸಿಎಸ್ ಕೆ ತಂಡದ್ದು. ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್ ನಲ್ಲೂ ಜಾದು ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕು.
ಅಷ್ಟಕ್ಕೂ ಮಹೇಂದ್ರ ಸಿಂಗ್ ಧೋನಿ ಸೌತ್ ಆಫ್ರಿಕಾ ಕ್ರಿಕೆಟ್ ಲೀಗ್ ನಲ್ಲಿ ಆಡ್ತಾರಾ ಅನ್ನೋ ಪ್ರಶ್ನೆಗೆ ಬಿಸಿಸಿಐ ಬಳಿ ಮಾತ್ರ ಉತ್ತರವಿದೆ. ಭಾರತೀಯ ಆಟಗಾರರು ವಿದೇಶಿ ಟಿ-20 ಲೀಗ್ ನಲ್ಲಿ ಆಡಬಾರದು ಎಂಬ ನಿಯಮಗಳಿರುವುದರಿಂದ ಧೋನಿ ಆಡುವುದು ಡೌಟ್. ಆದ್ರೆ ಮುಂದಿನ ದಿನಗಳಲ್ಲಿ ಬಿಸಿಸಿಐ ತನ್ನ ನಿಯಮಗಳನ್ನು ಸಡಿಲಗೊಳಿಸಿದ್ರೆ ಟೀಮ್ ಇಂಡಿಯಾದ ಹಲವು ಮಾಜಿ ಕ್ರಿಕೆಟಿಗರು ವಿದೇಶಿ ಟಿ-20 ಲೀಗ್ ಗಳಲ್ಲಿ ಆಡಬಹುದು. ಆದ್ರೆ ಬಿಸಿಸಿಐ ಅಂತಹ ದೊಡ್ಡ ಮನಸ್ಸು ಮಾಡುತ್ತಾ ಎಂಬುದು ಅರ್ಥವಾಗದ ವಿಷ್ಯ.

ಈಗಾಗಲೇ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿಯು ಈ ಟೂರ್ನಿಯನ್ನು ಯಶಸ್ವಿಗೊಳಿಸುವ ವಿಶ್ವಾಸದಲ್ಲಿದೆ. ಅಂತಾರಾಷ್ಟ್ರೀಯ ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಆಡಲಿದ್ದಾರೆ. ಸೌತ್ ಆಫ್ರಿಕಾ ಟಿ-20 ಕ್ರಿಕೆಟ್ ಲೀಗ್ ನ ಫ್ರಾಂಚೈಸಿಗಳನ್ನು ಖರೀದಿ ಮಾಡಿರುವ ಮಾಲೀಕರು ಈಗಾಗಲೇ ಐಪಿಎಲ್ ನಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿವೃದ್ದಿಗೂ ಪೂರಕವಾಗಲಿದೆ ಎಂದು ಸೌತ್ ಆಫ್ರಿಕಾ ಕ್ರಿಕೆಟ್ ಲೀಗ್ ನ ಕಮೀಷನರ್ ಗ್ರೇಮ್ ಸ್ಮಿತ್ ಹೇಳಿದ್ದಾರೆ.
ಇನ್ನೊಂದೆಡೆ ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳು ಕೂಡ ವಿದೇಶಿ ಟಿ-20 ಕ್ರಿಕೆಟ್ ಲೀಗ್ ನ ಮಾಲೀಕರಾಗಿದ್ದಾರೆ.ಕೆಕೆಆರ್, ಪಂಜಾಬ್ ಕಿಂಗ್ಸ್, ರಾಜಸ್ತಾನ ರಾಯಲ್ಸ್ ಫ್ರಾಂಚೈಸಿ ಮಾಲೀಕರು ಕೆರೆಬಿಯನ್ ಲೀಗ್ ನಲ್ಲೂ ಫ್ರಾಂಚೈಸಿಗಳನ್ನು ಖರೀದಿ ಮಾಡಿದ್ದಾರೆ. ಅದರಲ್ಲೂ ಕೆಕೆಆರ್ ಮತ್ತು ರಾಜಸ್ತಾನ ರಾಯಲ್ಸ್ ಮೂರು ವಿದೇಶಿ ಟಿ-20 ಕ್ರಿಕೆಟ್ ಲೀಗ್ ನ ಮಾಲೀಕತ್ವವನ್ನು ಪಡೆದುಕೊಂಡಿದೆ.