ಹಾಲಿ ಚಾಂಪಿಯನ್ ಇಂಗ್ಲೆಂಡ್ ನ್ಯೂಜಿಲೆಂಡ್ನಲ್ಲಿ ಏನು ಮಾಡಿದರೂ ಗೆಲುವು ಸಿಗುತ್ತಿಲ್ಲ. ದಕ್ಷಿಣ ಅಫ್ರಿಕಾ ವಿರುದ್ಧವೂ ಸೋಲು 3 ವಿಕೆಟ್ ಗಳ ಸೋಲು ಕಂಡ ಇಂಗ್ಲೆಂಡ್ ಟೂರ್ನಿಯಿಂದ ಹೊರ ಬೀಳುವ ಆತಂಕದಲ್ಲಿದೆ.
ದಕ್ಷಿಣ ಆಫ್ರಿಕಾ ಮೊದಲು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಮರಿಝಾನೆ ಕಾಪ್ ಡ್ಯಾನಿ ವ್ಯಾಟ್ (3), ನಾಯಕಿ ಹೀದರ್ ನೈಟ್ (9) ವಿಕೆಟ್ ಅನ್ನು ಬೇಗನೆ ಪಡೆದರು. ಅನುಭವಿ ನ್ಯಾಟ್ ಸೀವಿರ್ (16) ಕೂಡ ಬೇಗನೆ ಔಟಾದರು. ಆದರೆ ಟಾಮಿ ಬಿಮೌಂಟ್ (62), ಏಮಿ ಜೋನ್ಸ್ (53) ಉತ್ತಮ ಜೊತೆಯಾಟ ಆಡಿದರು.
ಕಾಪ್ ಮಧ್ಯಮ ಸರಿಯಲ್ಲಿ ಸೋಫಿಯಾ ಡಂಕ್ಲಿ (26), ಕ್ಯಾಥರಿನ್ ಬ್ರಂಟ್ (17) ಮತ್ತು ಕೇಟ್ ಕ್ರಾಸ್ (6) ವಿಕೆಟ್ ಅನ್ನು ಬೇಗನೆ ಪಡೆದರು. ಅಷ್ಟೇ ಅಲ್ಲ ವಿಶ್ವಕಪ್ ಪಂದ್ಯದಲ್ಲಿ 5 ವಿಕೆಟ್ಗಳ ಸಾಧನೆ ಮಾಡಿದರು. ನಿಗದಿತ 50 ಓವರುಗಳಲ್ಲಿ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿತು.
ದಕ್ಷಿಣ ಆಫ್ರಿಕಾ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಲಿಝೆಲ್ ಲಿ (9) ಬೇಗನೆ ಔಟಾದರು. ಲೊರಾ ವೊಲ್ವಾರ್ಟ್ (77), ತಾಝಿಮ್ ಬ್ರಿಟ್ಸ್ (23) ಮತ್ತು ನಾಯಕಿ ಸುನ್ ಲಸ್ (36) ಉತ್ತಮ ಆಟ ಆಡಿದರು. ಆದರೆ ಕೊನೆಯ ಓವರುಗಳಲ್ಲಿ ಮರಿಝಾನೆ ಕಾಪ್ (32) ರನ್ಗಳ ಕೊಡುಗೆ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು. ಚೋಲ್ ಟೈರನ್ (15) ಮತ್ತು ತ್ರಿಷಾ ಚೆಟ್ಟಿ ಅಜೇಯ 11 ರನ್ ಗಳಿಸಿ ಗೆಲುವಿನಲ್ಲಿ ಮಿಂಚಿದರು. ದಕ್ಷಿಣ ಆಫ್ರಿಕಾ 49.2 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 236 ರನ್ಗಳಿಸಿತು.
ಸತತ ಮೂರು ಪಂದ್ಯಗಳನ್ನು ಸೋತ ಇಂಗ್ಲೆಂಡ್ ಮುಂದಿನ ಪಂದ್ಯವನ್ನು ಭಾರತದ ವಿರುದ್ಧ ಆಡಲಿದೆ. ಇನ್ನೊಂದು ಪಂದ್ಯದ ಸೋಲು ಹಾಲಿ ಚಾಂಪಿಯನ್ನರನ್ನು ಲೀಗ್ ಹಂತದಲ್ಲೇ ಮನೆಗೆ ಅಟ್ಟಲಿದೆ. ಸತತ 3 ಗೆಲುವುಗಳನ್ನು ದಾಖಲಿಸಿದ ದಕ್ಷಿಣ ಆಫ್ರಿಕಾ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮುನ್ನಡೆಯಿತು.