Sourav Ganguly – ವ್ಹಾಹ್… ವಿರಾಟ್ ಕಳಪೆ ಫಾರ್ಮ್.. ಗಂಗೂಲಿ ಹೇಳಿದ್ದೇನು ?

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಈಗ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಸದ್ಯದ ಕಳಪೆ ಫಾರ್ಮ್ ನಿಂದಾಗಿ ವಿರಾಟ್ ಮಾಡಿರುವ ಈ ಹಿಂದಿನ ಸಾಧನೆ ಮತ್ತು ದಾಖಲೆಗಳು ನಗಣ್ಯವಾಗಿ ಕಾಣುತ್ತಿವೆ.
ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ವಿಶ್ಲೇಷಕರು ಎಲ್ಲರೂ ಸೇರಿಕೊಂಡು ವಿರಾಟ್ ವಿರುದ್ಧ ಟೀಕೆಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ. ಅಷ್ಟೇ ಅಲ್ಲ, ತಂಡದಿಂದ ಕೈಬಿಡಬೇಕು. ಫಾರ್ಮ್ ಪಡೆದುಕೊಂಡು ತಂಡಕ್ಕೆ ವಾಪಸ್ ಆಗಬೇಕು ಎಂಬ ಸಲಹೆಗಳು ಕೂಡ ಕೇಳಿಬರುತ್ತಿವೆ.
ಇನ್ನು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಕೆಲವರು ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಅದೇ ರೀತಿ ಬಿಸಿಸಿಐ ಬಿಗ್ ಬಾಸ್ ಹಾಗೂ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ವಿರಾಟ್ ಕೊಹ್ಲಿಗೆ ಬೆಂಬಲವನ್ನು ನೀಡಿದ್ದಾರೆ.
ಕಳಪೆ ಫಾರ್ಮ್ ನಿಂದ ಸಚಿನ್ ಕೂಡ ಕಂಗೆಟ್ಟಿದ್ದಾರೆ. ರಾಹುಲ್ ದ್ರಾವಿಡ್ ಕೂಡ ಚಡಪಡಿಸಿದ್ದಾರೆ. ನಾನು ಕೂಡ ಅನುಭವಿಸಿದ್ದೇನೆ. ಈಗ ವಿರಾಟ್ ಕೊಹ್ಲಿ ಕೂಡ ಅನುಭವಿಸುತ್ತಿದ್ದಾರೆ. ಆಟದಲ್ಲಿ ಕೆಟ್ಟ ಫಾರ್ಮ್ ಎಲ್ಲರ ಬದುಕಿನಲ್ಲೂ ಬಂದಿರುತ್ತದೆ. ಆದ್ರೆ ಇದರಿಂದ ಹೊರಬೇಕು. ವಿರಾಟ್ ಕೊಹ್ಲಿ ಹೊರಬರುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಸಾಧನೆಗಳನ್ನು ಅಂಕಿ ಅಂಶಗಳಲ್ಲಿ ನೋಡಿ. ಇದೆಲ್ಲವೂ ಬಂದಿರುವುದು ಅವರ ಸಾಮಥ್ರ್ಯ ಮತ್ತು ಗುಣಮಟ್ಟದ ಆಟದಿಂದ. ಹೌದು, ಇದೀಗ ಅವರು ಕೆಟ್ಟ ಸಮಯವನ್ನು ಎದುರು ನೋಡುತ್ತಿದ್ದಾರೆ. ಅದು ಅವರಿಗೂ ಗೊತ್ತಿದೆ. ವಿರಾಟ್ ಕೊಹ್ಲಿ ಗ್ರೇಟ್ ಪ್ಲೇಯರ್. ಅವರಿಗೆ ಗೊತ್ತಿದೆ. ಹೀಗಿರುವಾಗ ವಿರಾಟ್ ಕೊಹ್ಲಿ ಮತ್ತೆ ಕಮ್ ಬ್ಯಾಕ್ ಮಾಡುತ್ತಾರೆ. ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಾರೆ ಎಂದು ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರೀಡೆಯಲ್ಲಿ ಏರಿಳಿತಗಳು ಇರೋದು ಸಹಜ. ಈ ಕೆಟ್ಟ ಸಮಯವನ್ನು ಈ ಹಿಂದಿನ ಆಟಗಾರರು ಅನುಭವಿಸಿದ್ದಾರೆ. ಮುಂದಿನ ಆಟಗಾರರು ಅನುಭವಿಸಲಿದ್ದಾರೆ. ಯಾಕಂದ್ರೆ ಇದು ಕ್ರೀಡೆಯ ಭಾಗ. ಒಬ್ಬ ಕ್ರೀಡಾಪಟುವಾಗಿ ಕೇಳಿಕೊಂಡು ಅರಿತುಕೊಂಡು ಆಡಬೇಕು. ಆಗ ಯಶ ಸಾಧಿಸಲು ಸಾಧ್ಯ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ 12-13 ವರ್ಷಗಳಿಂದ ಆಡುತ್ತಿದ್ದಾರೆ. ಈ ಕೆಟ್ಟ ಸಮಯದಿಂದ ಹೇಗೆ ಹೊರಬರಬೇಕು ಎಂಬುದರ ದಾರಿಯನ್ನು ಅವರೇ ಕಂಡುಕೊಳ್ಳಬೇಕು. ವಿರಾಟ್ ಕೊಹ್ಲಿ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.