ಸೌರವ್, ದ್ರಾವಿಡ್, ಕುಂಬ್ಳೆ ವಿಶ್ವಕಪ್ ಗೆದ್ದಿದ್ದಾರಾ ? ಹಾಗಾದ್ರೆ ಇವ್ರೂ ಕೆಟ್ಟ ಆಟಗಾರರಾ ? – ರವಿಶಾಸ್ತ್ರಿ ಪಂಚ್
ದಕ್ಷಿಣ ಆಪ್ರಿಕಾ ವಿರುದ್ದ ಟೆಸ್ಟ್ ಮತ್ತು ಏಕದಿನ ಸರಣಿ ಸೋತ ಕೂಡಲೇ ಟೀಮ್ ಇಂಡಿಯಾವನ್ನು ಟೀಕಿಸುವುದು ಸರಿಯಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಟೀಮ್ ಇಂಡಿಯಾದ ಗೆಲುವಿನ ಸರಾಸರಿ 65ರಷ್ಟಿದೆ. ವಿಶ್ವದ ನಂಬರ್ ವನ್ ತಂಡ. ಕಳೆದ ಐದು ವರ್ಷಗಳಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದೆ. ಇದೀಗ ಒಂದು ಸರಣಿ ಸೋತ ಕೂಡಲೇ ತಂಡದ ಗುಣಮಟ್ಟ ಕಳಪೆಯಾಗಲು ಹೇಗೆ ಸಾಧ್ಯ ಎಂದು ರವಿಶಾಸ್ತ್ರಿ ಪ್ರಶ್ನೆ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲು ತಾತ್ಕಾಲಿಕ. ಹೀಗಾಗಿ ಈ ಬಗ್ಗೆ ಚಿಂತೆ ಯಾಕೆ ಮಾಡಬೇಕು. ನಮ್ಮ ಪ್ರತಿಸ್ಪರ್ಧಿಗಳು ಚಿಂತಿಸಲಿ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ರವಿಶಾಸ್ತ್ರಿ, ಇದು ವಿರಾಟ್ ಕೊಹ್ಲಿಯವರ ನಿರ್ದಾರ. ಅವರ ನಿರ್ಧಾರವನ್ನು ಗೌರವಿಸಬೇಕು. ಪ್ರತಿಯೊಂದಕ್ಕೂ ಒಂದು ಸಮಯ ಅಂತ ಇದೆ. ಈ ಹಿಂದೆ ಸಾಕಷ್ಟು ಶ್ರೇಷ್ಠ ಕ್ರಿಕೆಟಿಗರು ನಾಯಕತ್ವವನ್ನು ತ್ಯಜಿಸಿದ್ದಾರೆ. ಬ್ಯಾಟಿಂಗ್ ಕಡೆ ಗಮನ ಹರಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ. ಸುನೀಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ಎಮ್.ಎಸ್. ಧೋನಿ, ಇದೀಗ ವಿರಾಟ್ ಕೊಹ್ಲಿ ಅಂತ ಹೇಳಿದ್ರು.
ಇನ್ನು ವಿರಾಟ್ ಕೊಹ್ಲಿಯವರ ವರ್ತನೆಯಲ್ಲಿ ಬದಲಾವಣೆಯಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸ್ತ್ರಿ, ನಾನು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಒಂದೇ ಒಂದು ಎಸೆತವನ್ನು ನೋಡಿಲ್ಲ. ಆದ್ರೆ ವಿರಾಟ್ ಕೊಹ್ಲಿಯವರಲ್ಲಿ ಬದಲಾವಣೆಯಾಗಿದೆ ಅಂತ ನನಗೆ ಅನಿಸುತ್ತಿಲ್ಲ ಎಂದ್ರು.
ನಾನು ಏಳು ವರ್ಷಗಳ ಜೊತೆ ಟೀಮ್ ಇಂಡಿಯಾದಲ್ಲಿದ್ದೆ. ಹೀಗಾಗಿ ನನ್ನ ಆಟಗಾರರ ಬಗ್ಗೆ ನಾನು ಸಾರ್ವಜನಿಕವಾಗಿ ಏನನ್ನು ಹೇಳಲಾರೆ ಎಂದು ಖಡಕ್ ಆಗಿಯೇ ಹೇಳಿದ್ರು.
ಇನ್ನೊಂದೆಡೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಪ್ರಶಸ್ತಿ ಗೆದ್ದಿಲ್ಲ ಎಂಬ ಟೀಕೆ, ಆರೋಪಗಳಿಗೆ ರವಿಶಾಸ್ತ್ರಿ ಹೇಳಿದ್ದು ಹೀಗೆ,
ಪ್ರತಿಷ್ಠಿತ ಟ್ರೋಫಿಗಳನ್ನು ಗೆದ್ದಿಲ್ಲ ಅಂತ ನಾಯಕನನ್ನು ಟೀಕಿಸುವುದು ಸರಿಯಲ್ಲ. ಸಾಕಷ್ಟು ದೊಡ್ಡ ಆಟಗಾರರು ವಿಶ್ವಕಪ್ ಗೆದ್ದಿಲ್ಲ. ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರು ಕೂಡ ವಿಶ್ವಕಪ್ ಗೆದ್ದಿಲ್ಲ. ಹಾಗಂತ ಅವರೆಲ್ಲಾ ಕೆಟ್ಟ ಆಟಗಾರರು ಅಂತ ಹೇಳುವುದು ಸರಿನಾ ಎಂದು ರವಿಶಾಸ್ತ್ರಿ ಪರೋಕ್ಷವಾಗಿ ಎಲ್ಲರಿಗೂ ಟಾಂಗ್ ನೀಡಿದ್ರು.
ಇನ್ನು ಮಾತು ಮುಂದುವರಿಸಿದ ಶಾಸ್ತ್ರಿ, ನಮ್ಮಲ್ಲಿ ವಿಸ್ವಕಪ್ ಗೆದ್ದ ನಾಯಕರು ಎಷ್ಟು ಜನ ಇದ್ದಾರೆ. ಸಚಿನ್ ತೆಂಡುಲ್ಕರ್ ಕೂಡ ವಿಸ್ವಕಪ್ ಗೆಲ್ಲಲು ಆರು ವಿಸ್ವಕಪ್ ಆಡಬೇಕಾಗಿತ್ತು. ಹೀಗಾಗಿ ನಾವು ಟೀಕೆ ಮಾಡುವಾಗ ನೋಡಿಕೊಂಡು ಟೀಕೆ ಮಾಡಬೇಕು ಎಂದು ಹೇಳಿದ್ರು.
ಇನ್ನು ಬಿಸಿಸಿಐ ಮತ್ತು ವಿರಾಟ್ ನಡುವಿನ ಮುಸುಕಿನ ಗುದ್ದಾಟಕ್ಕೆ ಸಂವಹನದ ಕೊರತೆಯೇ ಕಾರಣ ಎಂದು ಹೇಳಿದ್ರು. ಅವರ ನಡುವೆ ಏನು ನಡೆದಿದೆ ಎಂಬುದು ಅವರಿಗೆ ಮಾತ್ರ ಗೊತ್ತು. ಹೀಗಾಗಿ ಮಾಹಿತಿ ಇಲ್ಲದೆ ಅದರ ಬಗ್ಗೆ ಮಾತನಾಡಬಾರದು. ಸುಮ್ಮನೆ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ರವಿಶಾಸ್ತ್ರಿ ಹೇಳಿದ್ರು.