Sourav Ganguly – ಬ್ರಿಟನ್ ಸಂಸತ್ ನಲ್ಲಿ ಸೌರವ್ ಗಂಗೂಲಿಗೆ ಗೌರವ
ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಬ್ರಿಟನ್ ಸಂಸತ್ ಜುಲೈ 13ರಂದು ಗೌರವಿಸಿದೆ.
ಬ್ರಿಟಿಷ್ ಸಂಸತ್ ನನ್ನನ್ನು ಬಂಗಾಳಿ ಎಂದು ಗೌರವಿಸಿದೆ. ಇದು ತುಂಬಾ ಸಂತಸವನ್ನುಂಟು ಮಾಡಿದೆ.ಕಳೆದ ಆರು ತಿಂಗಳಿಂದ ಅವರು ನನ್ನನ್ನು ಸಂಪರ್ಕ ಮಾಡುತ್ತಿದ್ದರು. ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಿ ಬ್ರಿಟನ್ ಸಂಸತ್ ಗೌರವಿಸುತ್ತಿದೆ. ಈ ಬಾರಿ ನನಗೆ ಸಿಕ್ಕಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಅಚ್ಚರಿಯಂದ್ರೆ 2002ರಲ್ಲಿ ನ್ಯಾಟ್ ವೆಸ್ಟ್ ಸರಣಿ ಗೆದ್ದ ದಿನದಂದೆ ಬ್ರಿಟನ್ ಸಂಸತ್ ಸೌರವ್ ಗಂಗೂಲಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿದೆ. ಜುಲೈ 13, 2002ರಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡದ ವಿರುದ್ದ ರೋಚಕ ಗೆಲುವನ್ನು ಸಾಧಿಸಿತ್ತು. ಟೀಮ್ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಲಾಡ್ರ್ಸ್ ಅಂಗಣದ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಕುಣಿದಾಡಿ ಗೆಲುವನ್ನು ಸಂಭ್ರಮಿಸಿದ್ದರು.
ಈ ಬಗ್ಗೆ ಕೇಳಿದಾಗ, ಹೋ ಹೌದಾ.. ನಾನು ಇನ್ ಸ್ಟಾಗ್ರಾಮ್ ನಲ್ಲಿ ನೋಡಿದ್ದೆ. ತುಂಬಾ ಸಮಯವಾಯ್ತು. 20 ವರ್ಷಗಳ ಹಿಂದೆ ಎಂದು ಗಂಗೂಲಿ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ತಂಡವನ್ನು ಇಂಗ್ಲೆಂಡ್ ನೆಲದಲ್ಲಿ ಸೋಲಿಸುವುದು ಅಂದ್ರೆ ಅದೊಂದು ಅವಿಸ್ಮರಣೀಯ. ಪ್ರಸ್ತುತ ಹಾಲಿ ಟೀಮ್ ಇಂಡಿಯಾ ಕೂಡ ಅದನ್ನೇ ಮಾಡುತ್ತಿದೆ. ಈಗಾಗಲೇ ರೋಹಿತ್ ಬಳಗ ಟಿ-20 ಸರಣಿಯನ್ನು ಗೆದ್ದುಕೊಂಡಿದೆ. ಏಕದಿನ ಸರಣಿಯಲ್ಲೂ 1-0ಯಿಂದ ಮುನ್ನಡೆಯಲ್ಲಿದೆ ಎಂದರು ಸೌರವ್ ಗಂಗೂಲಿ.
ಇನ್ನು ಮೊದಲ ಏಕದಿನ ಪಂದ್ಯದ ಗೆಲುವಿನ ಬಗ್ಗೆಯೂ ಸೌರವ್ ಗಂಗೂಲಿ ಸಂತಸ ವ್ಯಕ್ತಪಡಿಸಿದ್ದರು. ಜಸ್ಪ್ರಿತ್ ಬೂಮ್ರಾ ಮತ್ತು ಮಹಮ್ಮದ್ ಶಮಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಇಂಗ್ಲೆಂಡ್ ಪಿಚ್ ನ ಲಾಭವನ್ನು ಪಡೆದುಕೊಂಡ್ರು. ಯಾಕಂದ್ರೆ ಇಂಗ್ಲೆಂಡ್ ಪಿಚ್ ಹೆಚ್ಚು ಬೌಲರ್ ಗಳಿಗೆ ಪೂರಕವಾಗಿರುತ್ತದೆ ಎಂದರು.

ಇನ್ನೊಂದೆಡೆ ಟೆಸ್ಟ್ ಪಂದ್ಯದ ಸೋಲನ್ನು ಕೂಡ ಸಮರ್ಥಿಸಿಕೊಂಡ್ರು. ಕ್ರೀಡೆಯಲ್ಲಿ ಕೆಲವೊಂದು ಬಾರಿ ಹೀಗೆಯೇ ಆಗುತ್ತದೆ. ಟೆಸ್ಟ್ ಪಂದ್ಯದ ಗೆಲುವಿನ ಶ್ರೇಯ ಇಂಗ್ಲೆಂಡ್ ತಂಡಕ್ಕೆ ಅರ್ಹವಾಗಿಯೇ ಸಲ್ಲಬೇಕು. ಇಂಗ್ಲೆಂಡ್ ಆಟಗಾರರು ಅದ್ಭುತವಾಗಿ ಆಡಿದ್ದಾರೆ. 400 ರನ್ ಗಳ ಸವಾಲನ್ನು ನಾಲ್ಕನೇ ಇನಿಂಗ್ಸ್ ನಲ್ಲಿ ಬೆನ್ನಟ್ಟಿ ಗೆಲ್ಲುವುದು ಸುಲಭದ ಸಂಗತಿಯಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಸೌರವ್ ಗಂಗೂಲಿ ಕೆಲವು ದಿನಗಳಿಂದ ಇಂಗ್ಲೆಂಡ್ ನಲ್ಲೇ ಇದ್ದಾರೆ. ಜುಲೈ 8ರಂದು ಸೌರವ್ ಗಂಗೂಲಿ ಅವರು ತನ್ನ 50ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ್ರು. ಈ ಬರ್ತ್ ಡೇ ಪಾರ್ಟಿಯಲ್ಲಿ ಆಪ್ತ ಗೆಳೆಯ ಸಚಿನ್ ತೆಂಡುಲ್ಕರ್, ಬಿಸಿಸಿಐ ಕಾರ್ಯದರ್ಶಿ ಜೈ ಶಾ, ರಾಜೀವ್ ಶುಕ್ಲಾ ಭಾಗಿಯಾಗಿದ್ದರು. ನಂತರ ತನ್ನ ಕುಟುಂಬ ಮತ್ತು ಗೆಳೆಯರ ಜೊತೆ ಗಂಗೂಲಿ ಓಂ ಶಾಂತಿ ಓಂ ಹಾಡಿಗೆ ಡಾನ್ಸ್ ಮಾಡಿದ್ದರು.
ನಾವು ಈಗ ಲಂಡನ್ ನಲ್ಲಿ ವಾಸ ಮಾಡುತ್ತಿದ್ದೇವೆ. ನನ್ನ ಮಗಳು ಇಲ್ಲಿ ಓದುತ್ತಿದ್ದಾಳೆ. ಅವಳ ಜೊತೆ ಕಾಲ ಕಳೆಯುವುದು ಅದ್ಭುತವಾಗಿದೆ. ನಾನು ಪ್ರತಿ ಕ್ಷಣವನ್ನು ಪ್ರೀತಿಸುತ್ತಿದ್ದೇನೆ ಎಂದರು.