ಮಾಜಿ ನಾಯಕ ಸ್ಟೀವನ್ ಸ್ಮಿತ್ (78) ಹಾಗೂ ಮಾರ್ನಸ್ ಲಾಬುಶೇನ್ (90) ಅವರ ಭರ್ಜರಿ ಆಟದ ನೆರವಿನಿಂದ ಆಸ್ಟ್ರೇಲಿಯಾ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇನ್ನಿಂಗ್ಸ್ ಮುನ್ನಡೆಯ ಕನಸು ಕಾಣುತ್ತಿದೆ.
ಸೋಮವಾರ 2 ವಿಕೆಟ್ ಗೆ 271 ರನ್ ಗಳಿಂದ ಮೊದಲ ಇನ್ನಿಂಗ್ಸ್ ಆಟ ಮುಂದುವರಿಸಿದ ಆಸೀಸ್ ದಿನದಾಟದಂತ್ಯಕ್ಕೆ 7 ವಿಕೆಟ್ ಗೆ 449 ರನ್ ಸೇರಿಸಿತು. ಮಿಚೆಲ್ ಸ್ಟಾರ್ಕ್ (12) ಹಾಗೂ ಪ್ಯಾಟ್ ಕಮಿನ್ಸ್ (4) ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 27 ರನ್ ಗಳನ್ನು ಗಳಿಸಬೇಕಿದೆ.
ಮೂರನೇ ವಿಕೆಟ್ ಗೆ ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು. ಈ ಜೋಡಿ 193 ಎಸೆತಗಳಲ್ಲಿ 108 ರನ್ ಸೇರಿಸಿ ತಂಡಕ್ಕೆ ನೆರವಾಯಿತು. ಭರವಸೆಯ ಆಟಗಾರ ಮಾರ್ನಸ್ 158 ಎಸೆತಗಳಲ್ಲಿ 12 ಬೌಂಡರಿ ಸಹಾಯದಿಂದ 90 ರನ್ ಸಿಡಿಸಿ ಶಾಹೀನ್ ಶಾ ಆಫ್ರಿದಿ ತೋಡಿದ ಖೆಡ್ಡಾಗೆ ಬಲಿಯಾದರು. ಟ್ರಾವಿಸ್ ಹೆಡ್ (8) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಕ್ಯಾಮರೂನ್ ಗ್ರೀನ್ (48) ಮತ್ತು ಸ್ಮಿತ್ ಜೋಡಿ 5ನೇ ವಿಕಟ್ ಗೆ 81 ರನ್ ಸೇರಿಸಿತು.
ಮಾಜಿ ನಾಯಕ ಸ್ಟೀವನ್ ಸ್ಮಿತ್ 196 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 78 ರನ್ ಕಲೆ ಹಾಕಿದರು.
ಪಾಕಿಸ್ತಾನದ ಪರ ನೌಮನ್ ಅಲಿ 107 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು.