ಕೆರೆಬಿಯನ್ ಅಂಗಳದಲ್ಲಿ ರೆಡ್ ಬಾಲ್ ಕ್ರಿಕೆಟ್ನಲ್ಲಿ ನಿರೀಕ್ಷಿತ ಸಕ್ಸಸ್ ಕಾಣದ ಇಂಗ್ಲೆಂಡ್, ವಿಂಡೀಸ್ ನೆಲದಲ್ಲಿ ಮತ್ತೊಂದು ʼಟೆಸ್ಟ್ʼ ಎದುರಿಸಲು ಸಜ್ಜಾಗಿದೆ.
ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಆಂಟಿಗುವಾದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳ ಸಕಲ ಸಿದ್ಧತೆ ಮಾಡಿಕೊಂಡಿವೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಆಘಾತ ಅನುಭವಿಸಿರುವ ಆಂಗ್ಲರು, ಕೆರೆಬಿಯನ್ ನೆಲದಲ್ಲಿ ಗೆಲುವಿನ ಯಶಸ್ಸು ಸಾಧಿಸಲು ಸಾಕಷ್ಟು ಸವಾಲು ಎದುರಿಸಬೇಕಿದೆ.
ಪ್ರಮುಖವಾಗಿ ಇಂಗ್ಲೆಂಡ್ ತಂಡದ ಅನುಭವಿ ಹಾಗೂ ಪ್ರಮುಖ ಬೌಲಿಂಗ್ ಅಸ್ತ್ರಗಳಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅನುಪಸ್ಥಿತಿ ತಂಡಕ್ಕೆ ದೊಡ್ಡ ಸವಾಲಾಗಿದೆ. ಇನ್ನು ಅಲೆಕ್ಸ್ ಲೀಸ್ ಅಗ್ರ ಕ್ರಮಾಂಕದಲ್ಲಿ ಯಾವ ರೀತಿ ಬ್ಯಾಟಿಂಗ್ ಪ್ರದರ್ಶಿಸಲಿದ್ದಾರೆ ಹಾಗೂ ಡ್ಯಾನ್ ಲಾರೆನ್ಸ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನ ಹೇಗೆ ಬಳಸಿಕೊಳ್ಳುತ್ತಾರೆ ಹಾಗೂ ವಿದೇಶಿ ನೆಲದಲ್ಲಿ ದೊಡ್ಡಮಟ್ಟದ ಯಶಸ್ಸು ಕಾಣದ ಕ್ರಿಸ್ ವೋಕ್ಸ್ ತಮ್ಮ ಫಾರ್ಮ್ ಕಂಡುಕೊಳ್ಳುವರೆ ಎಂಬುದು ನಿರೀಕ್ಷೆ ಮೂಡಿಸಿದೆ.
ಉಭಯ ತಂಡಗಳ ನಡುವಿನ ರಿಚರ್ಡ್ಸ್-ಬಾಥಂ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳು ನಡೆಯಲಿದ್ದು, ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಭಾಗವಾಗಿರುವ ಈ ಸರಣಿಯಲ್ಲಿ ಎರಡು ತಂಡಗಳು ಗೆಲುವಿನ ನಿರೀಕ್ಷೆ ಹೊಂದಿವೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಇಂದಿನಿಂದ ಆಂಟಿಗುವಾದಲ್ಲಿ ನಡೆಯಲಿದ್ದು, ಮಾ.16-20ರವರೆಗೆ 2ನೇ ಟೆಸ್ಟ್ ಹಾಗೂ ಮಾ.24ರಿಂದ 28ರವರೆಗೆ ಗ್ರೆನೆಡಾದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.