ಸ್ಮೃತಿ ಮಂದಾನ(39) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್(31*) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಆಟದ ನೆರನಿಂದ ಅತಿಥೇಯ ಶ್ರೀಲಂಕಾ ವನಿತೆಯರ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ದುಂಬಾಲದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ, ಆರಂಭಿಕ ಬ್ಯಾಟರ್‌ಗಳ ಉತ್ತಮ ಪ್ರದರ್ಶನದ ನಡುವೆಯೂ 20 ಓವರ್‌ಗಳಲ್ಲಿ 125/7 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಟಾರ್ಗೆಟ್ ಬೆನ್ನತ್ತಿದ ಭಾರತ 19.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 127 ರನ್‌ಗಳಿಸಿ ಜಯದ ನಗೆಬೀರಿತು. ಇದರೊಂದಿಗೆ ಭಾರತ ಮಹಿಳಾ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡಿತು.

ಲಂಕಾ ಬ್ಯಾಟಿಂಗ್ ವೈಫಲ್ಯ:
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾಕ್ಕೆ ಆರಂಭಿಕ ಬ್ಯಾಟರ್‌ಗಳಾದ ವಿಷಮಿ ಗುಣರತ್ನೆ 45(50) ಹಾಗೂ ಚಮಿರಾ ಅಟಪಟ್ಟು 43(41) ಮೊದಲ ವಿಕೆಟ್‌ಗೆ 13.5 ಓವರ್‌ಗಳಲ್ಲಿ 87 ರನ್‌ಗಳ ಭರ್ಜರಿ ಆರಂಭ ಒದಗಿಸಿದರು. ಈ ಹಂತದಲ್ಲಿ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಭಾರತದ ಆಟಗಾರ್ತಿಯರು ಶ್ರೀಲಂಕಾ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ಟೀಂ ಇಂಡಿಯಾದ ಸಂಘಟಿತ ಬೌಲಿಂಗ್ ದಾಳಿಗೆ ಸಿಲುಕಿದ ಶ್ರೀಲಂಕಾ, ಕೇವಲ 19 ರನ್‌ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು. ಶ್ರೀಲಂಕಾ ಪರ ಆರಂಭಿಕರ ಹೊರತಾಗಿ ಯಾರೊಬ್ಬರು ಎರಡಂಕ್ಕಿತ ಮೊತ್ತ ಕಲೆಹಾಕದೆ ವಿಕೆಟ್ ಕೈಚಲ್ಲಿದರು. ಅಂತಿಮವಾಗಿ ಶ್ರೀಲಂಕಾ, 7 ವಿಕೆಟ್ ನಷ್ಟಕ್ಕೆ 125 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಭಾರತದ ಪರ ದೀಪ್ತಿ ಶರ್ಮ 2 ವಿಕೆಟ್ ಪಡೆದರೆ, ರೇಣುಕಾ ಸಿಂಗ್, ರಾಧ ಯಾದವ್, ಪೂಜಾ ವಸ್ತ್ರಾರ್ಕರ್ ಹಾಗೂ ಹರ್ಮನ್‌ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದರು.

ಮಂದಾನ-ಹರ್ಮನ್‌ಪ್ರೀತ್ ಆಸರೆ:
ಲಂಕಾ ನೀಡಿದ ಸುಲಭದ ಟಾರ್ಗೆಟ್ ಚೇಸ್ ಮಾಡಿದ ಭಾರತಕ್ಕೆ ಸ್ಮೃತಿ ಮಂದಾನ(39) ಹಾಗೂ ಶಫಾಲಿ ವರ್ಮ(17) ಮೊದಲ ವಿಕೆಟ್‌ಗೆ 30 ರನ್ ಕಲೆಹಾಕಿದರು. ನಂತರದಲ್ಲಿ ಬಂದ ಮೇಘನಾ(17) ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಮಂದಾನ ಹಾಗೂ ನಾಯಕಿ ಹರ್ಮನ್‌ಪ್ರೀತ್(31*) 3ನೇ ವಿಕೆಟ್‌ಗೆ 38 ರನ್ ಜೊತೆಯಾಟದ ಮೂಲಕ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಮಂದಾನ(39) ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಬಂದ ಜಮೈಮಾ ರೋಡ್ರಿಗಸ್(3) ಹಾಗೂ ಯಾಸ್ತಿಕಾ ಭಾಟಿಯಾ(13) ನಿರೀಕ್ಷಿತ ಆಟವಾಡಲಿಲ್ಲ. ಅಂತಿಮವಾಗಿ ಹರ್ಮನ್‌ಪ್ರೀತ್ ಹಾಗೂ ದೀಪ್ತಿ ಶರ್ಮ(5*) ತಂಡವನ್ನ ಗೆಲುವಿನ ದಡ ಸೇರಿಸಿದರು. ಶ್ರೀಲಂಕಾ ಪರ ರಂಗಶಿಂಘೆ ಹಾಗೂ ರಣವೀರ ತಲಾ 2 ವಿಕೆಟ್ ಪಡೆದರು.
ಭಾರತ ಮಹಿಳಾ ತಂಡದ ಗೆಲುವಿಗೆ ಕಾರಣವಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ಜೂ.27ರಂದು ದಾಂಬುಲದಲ್ಲಿ ನಡೆಯಲಿದೆ.