ಪಾಕಿಸ್ತಾನ(Pakistan) ತಂಡದ ವೇಗದ ಬೌಲರ್ ಶಹೀನ್ ಅಫ್ರೀದಿ(Shaheen Afridi), ಅತಿಥೇಯ ಶ್ರೀಲಂಕಾ(Sri Lanka) ವಿರುದ್ಧದ 2ನೇ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಅತಿಥೇಯರ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಎಡಗೈ ವೇಗಿ, ಮೊದಲ ಇನ್ನಿಂಗ್ಸ್ನಲ್ಲಿ 58 ರನ್ಗಳಿಗೆ 4 ವಿಕೆಟ್ ಪಡೆದು ಮಿಂಚಿದ್ದರು. ಶಹೀನ್ ಅಫ್ರಿದಿ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ, 222 ರನ್ಗಳಿಗೆ ಆಲೌಟ್ ಆಯಿತು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಕೇವಲ 7 ಓವರ್ಗಳಷ್ಟೇ ಬೌಲಿಂಗ್ ಮಾಡಿದ ಶಹೀನ್ ಅಫ್ರಿದಿ, ಗಾಯದ ಸಮಸ್ಯೆಯಿಂದಾಗಿ ಮೂರನೇ ದಿನದಾಟದ ವೇಳೆ ಮೈದಾನದಿಂದ ಹೊರಗುಳಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶ್ರೀಲಂಕಾ, 337 ರನ್ಗಳಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ 342 ರನ್ಗಳ ಗುರಿ ನೀಡಿತ್ತು. ಈ ಟಾರ್ಗೆಟ್ ಚೇಸ್ ಮಾಡಿದ ಪಾಕಿಸ್ತಾನ, ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ ಶತಕ, ನಾಯಕ ಬಾಬರ್ ಆಜ಼ಂ, ಮೊಹಮ್ಮದ್ ರಿಜ್ವಾನ್ ಅವರ ಜವಾಬ್ದಾರಿಯ ಬ್ಯಾಟಿಂಗ್ನಿಂದ 4 ವಿಕೆಟ್ಗಳ ಗೆಲುವು ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಈ ನಡುವೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶಹೀನ್ ಅಫ್ರಿದಿ, 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಶಹೀನ್ ಅಫ್ರಿದಿ ತಂಡದಿಂದ ಹೊರಗುಳಿದ ಬೆನ್ನಲ್ಲೇ ಹ್ಯಾರಿಸ್ ರೌಫ್ ಹಾಗೂ ಆಲ್ರೌಂಡರ್ ಫಹೀಮ್ ಅಶ್ರಫ್ ಅವರುಗಳ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಗಾಯದ ಸಮಸ್ಯೆಯಿಂದಾಗಿ ಶಹೀನ್ ಅಫ್ರೀದಿ, ಟೆಸ್ಟ್ ಕ್ರಿಕೆಟ್ನಲ್ಲಿ ಪಾಕಿಸ್ತಾನದ 11ನೇ ಆಟಗಾರನಾಗಿ 100 ವಿಕೆಟ್ಗಳ ಮೈಲುಗಲ್ಲು ದಾಟಲು ವಿಳಂಬವಾಗಿದೆ.