ಆರಂಭಿಕ ಬ್ಯಾಟ್ಸಮನ್ ಅಬ್ದುಲ್ಲಾ ಶಫೀಕಿ(160*) ಅಜೇಯ ಶತಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಅಬ್ಬರಿಸಿದ ಪಾಕಿಸ್ತಾನ(Pakistan) ಅತಿಥೇಯ ಶ್ರೀಲಂಕಾ(Sri Lanka) ವಿರುದ್ಧ 4 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 342 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಪಾಕಿಸ್ತಾನ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಕೊನೆಯ ದಿನದಾಟದಲ್ಲಿ ಅತಿಥೇಯ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಪಾಕಿಸ್ತಾನ, 127.2 ಓವರ್ಗಳಲ್ಲಿ 344 ರನ್ಗಳಿಸಿ ತನ್ನ 2ನೇ ದಾಖಲೆಯ ಚೇಸ್ ಮಾಡುವ ಮೂಲಕ ಗೆಲುವಿನ ದಡಸೇರಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ 1-0 ಮುನ್ನಡೆ ಸಾಧಿಸಿತು. ಈ ಹಿಂದೆ ಪಾಕಿಸ್ತಾನ 2015ರಲ್ಲಿ ಶ್ರೀಲಂಕಾ ವಿರುದ್ಧ 377 ರನ್ ಚೇಸ್ ಮಾಡಿತ್ತು.
4ನೇ ದಿನದಂತ್ಯದ ಮೊತ್ತ 222/3 ರನ್ಗಳಿಂದ 5ನೇ ದಿನದಾಟ ಆರಂಭಿಸಿದ ಪಾಕಿಸ್ತಾನಕ್ಕೆ ಗೆಲುವಿಗಾಗಿ 120 ರನ್ಗಳ ಅಗತ್ಯವಿತ್ತು. ಆದರೆ ಬ್ಯಾಟ್ಸ್ಮನ್ಗಳ ಜವಾಬ್ದಾರಿಯುತ ಆಟದಿಂದ ಸಂಪೂರ್ಣ ಹಿಡಿತ ಸಾಧಿಸಿದ ಪಾಕಿಸ್ತಾನದ ಪರ ನಾಯಕ ಬಾಬರ್ ಆಜ಼ಂ(55), ಮೊಹಮ್ಮದ್ ರಿಜ್ವಾನ್(40) ರನ್ಗಳ ಉಪಯುಕ್ತ ರನ್ಗಳಿಸಿದರು. ಆದರೆ ಮತ್ತೊಂದೆಡೆ ತಂಡಕ್ಕೆ ಆಸರೆಯಾಗಿನಿಂತು ಆಡಿದ ಅಬ್ದುಲ್ಲಾ ಶಫೀಕಿ(Abdullah Shafique) 160* ಶತಕ ಸಿಡಿಸಿ ಅಬ್ಬರಿಸಿದರು. ಕೊನೆವರೆಗೂ ಛಲಬಿಡದೆ ಹೋರಾಡಿದ ಶಫೀಕಿ, ತಂಡವನ್ನ ಗೆಲುವಿನ ದಡಸೇರಿಸಿದರು. ಲಂಕಾ ಪರ ಪ್ರಭಾತ್ ಜಯಸೂರ್ಯ(4/135) ಯಶಸ್ವಿ ಬೌಲರ್ ಎನಿಸಿದರು.
ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಚಂದಿಮಾಲ್(76) ಅರ್ಧಶತಕದ ನೆರವಿನಿಂದ ಅತಿಥೇಯ ಶ್ರೀಲಂಕಾ 222 ರನ್ಗಳಿಗೆ ಆಲೌಟ್ ಆಗಿತ್ತು. ಬಳಿಕ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ನಾಯಕ ಬಾಬರ್ ಆಜ಼ಂ(119) ಶತಕದ ನಡುವೆಯೂ 218 ರನ್ಗಳಿಸಿ 4 ರನ್ಗಳ ಹಿನ್ನಡೆ ಅನುಭವಿಸಿತ್ತು. ನಂತರ ಉತ್ತಮ ಆಟವಾಡಿದ ಶ್ರೀಲಂಕಾ, 337 ರನ್ಗಳ ಉತ್ತಮ ಮೊತ್ತ ಕಲೆಹಾಕಿತು. ಮೊದಲ ಇನ್ನಿಂಗ್ಸ್ನಲ್ಲಿ ಮಿಂಚಿದ್ದ ಚಂದಿಮಾಲ್ 2ನೇ ಇನ್ನಿಂಗ್ಸ್ನಲ್ಲೂ 94* ರನ್ಗಳಿಸಿ ತಂಡಕ್ಕೆ ಆಸರೆಯಾದರು. ಪಾಕ್ ಪರ ನವಾಜ್(5/88) ಉತ್ತಮ ಬೌಲಿಂಗ್ ದಾಳಿ ನಡೆಸಿದ್ದರು.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ: 222 ಮತ್ತು 337
ಪಾಕಿಸ್ತಾನ: 218 ಮತ್ತು 344
ಪಂದ್ಯ ಶ್ರೇಷ್ಠ: ಅಬ್ದುಲ್ಲಾ ಶಫೀಕಿ