ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ವಿರುದ್ಧದ 5ನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.
ಲಂಕಾ ವಿರುದ್ಧದ 4ನೇ ಏಕದಿನ ಪಂದ್ಯದ ವೇಳೆ ಟ್ರಾವಿಸ್ ಹೆಡ್ ಹ್ಯಾಮ್ಸ್ಟ್ರಿಂಗ್ ಸಮಸ್ಯೆಗೆ ತುತ್ತಾಗಿದ್ದರು. ಇದೇ ಕಾರಣದಿಂದಾಗಿ 28 ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಇದೀಗ 5ನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ಈಗಾಗಲೇ 3-1ರ ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ಉಭಯ ತಂಡಗಳ ನಡುವಿನ 5ನೇ ಏಕದಿನ ಪಂದ್ಯ ಜೂ.24ರಂದು ಕೊಲಂಬೋದಲ್ಲಿ ನಡೆಯಲಿದೆ.
ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟ್ರಾವಿಸ್ ಹೆಡ್, ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಎದುರಾಗಿದೆ. ಒಂದೊಮ್ಮೆ ಟ್ರಾವಿಸ್ ಹೆಡ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದೆ ಆದಲ್ಲಿ ಆಸ್ಟ್ರೇಲಿಯಾ ತನ್ನ ಮಧ್ಯಮ ಕ್ರಮಾಂಕವನ್ನ ಮರು ಹೊಂದಿಸಬೇಕಿದೆ. ಎರಡು ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಜೂ.29ರಂದು ಗಾಲೆಯಲ್ಲಿ ಆರಂಭವಾಗಲಿದೆ.
ಟ್ರಾವಿಸ್ ಹೆಡ್ ಗಾಯದ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್, ಹೆಚ್ಚಿನ ಮುನ್ನೆಚ್ಚರಿಕೆಯಿಂದಾಗಿ ಟ್ರಾವಿಸ್ ಹೆಡ್ ಅವರನ್ನ ತಂಡದಿಂದ ಕೈಬಿಡಲಾಗಿದೆ. ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ 5ನೇ ಏಕದಿನ ಪಂದ್ಯಕ್ಕೂ ಸ್ಟಾರ್ಕ್ ಅಲಭ್ಯರಾಗಲಿದ್ದಾರೆ ಎಂದಿದ್ದಾರೆ.