ಅತಿಥೇಯ ಶ್ರೀಲಂಕಾ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಏಕದಿನ ಸರಣಿಯ 5ನೇ ಪಂದ್ಯ ಇಂದು ಕೊಲಂಬೊದಲ್ಲಿ ನಡೆಯಲಿದೆ. ಕೊಲಂಬೊದಲ್ಲಿ ನಡೆಯಲಿರುವ ಅಂತಿಮ ಪಂದ್ಯಕ್ಕಾಗಿ ಎರಡು ತಂಡಗಳು ಸೂಕ್ತ ತಯಾರಿ ಮಾಡಿಕೊಂಡಿವೆ. ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಅತಿಥೇಯ ಶ್ರೀಲಂಕಾ 3-1ರ ಅಂತರದಿಂದ ಸರಣಿ ವಶಪಡಿಸಿಕೊಂಡಿದ್ದು, ಇಂದಿನ ಪಂದ್ಯವನ್ನು ಗೆದ್ದು ಗೆಲುವಿನ ಅಂತರ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ ಮೊದಲ ಪಂದ್ಯದ ಗೆಲುವಿನ ನಂತರ ಸತತ ಮೂರು ಪಂದ್ಯಗಳ ಸೋಲಿನೊಂದಿಗೆ ಆಘಾತ ಕಂಡಿರುವ ಆಸ್ಟ್ರೇಲಿಯಾ, ಕೊನೆಯ ಪಂದ್ಯವನ್ನಾದರು ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಅತಿಥೇಯ ಶ್ರೀಲಂಕಾ ಬ್ಯಾಟಿಂಗ್-ಬೌಲಿಂಗ್ ಎರಡು ವಿಭಾಗದಲ್ಲಿ ಬಲಿಷ್ಠವಾಗಿದೆ. ಪ್ರಮುಖವಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಉತ್ತಮ ಫಾರ್ಮ್ನಲ್ಲಿರುವುದು ಅತಿಥೇಯ ತಂಡಕ್ಕೆ ಸಮಾಧಾನ ತಂದಿದೆ. ಆದರೆ ಗೆಲುವಿನೊಂದಿಗೆ ಸರಣಿ ಆರಂಭಿಸಿದ್ದ ಆಸ್ಟ್ರೇಲಿಯಾ ನಂತರದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ಬರುತ್ತಿದ್ದರು ಆಸೀಸ್ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ.
4ನೇ ಪಂದ್ಯದಲ್ಲಿ ಕೇವಲ 4 ರನ್ಗಳ ಅಂತರದಿಂದ ಸೋತಿದ್ದು, ಆಸೀಸ್ ತಂಡಕ್ಕೆ ದೊಡ್ಡ ಆಘಾತವನ್ನುಂಟು ಮಾಡಿತು. ಮತ್ತೊಂದೆಡೆ ಪ್ರವಾಸಿ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್, ಗಾಯದ ಸಮಸ್ಯೆ ಕಾರಣದಿಂದ 5ನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಆಸೀಸ್ ತಂಡದ ಮಧ್ಯಮ ಕ್ರಮಾಂಕ ಮತ್ತಷ್ಟು ಸಡಿಲಗೊಂಡಿದೆ. ಈ ಎಲ್ಲಾ ಕೊರತೆಗಳನ್ನು ನೀಗಿಸಿಕೊಂಡು ಕಣಕ್ಕಿಳಿದಲ್ಲಿ ಮಾತ್ರ ಆಸೀಸ್ ಗೆಲುವು ಸಾಧಿಸಲು ಸಾಧ್ಯವಾಗಲಿದೆ.