ಮೊದಲ ಪಂದ್ಯದ ಸೋಲಿನಿಂದ ಬಲಿಷ್ಠ ಕಮ್ಬ್ಯಾಕ್ ಮಾಡಿರುವ ಶ್ರೀಲಂಕಾ, ಸಂಘಟಿತ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 26 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಪಲ್ಲೆಕೆಲೆ ಇಂಟರ್ ನ್ಯಾಷಿನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, 47.4 ಓವರ್ಗಳಲ್ಲಿ 9 ವಿಕೆಟ್ಗೆ 220 ರನ್ಗಳಿಸಿತು. ಈ ಸವಾಲು ಬೆನ್ನತ್ತಿದ ಆಸ್ಟ್ರೇಲಿಯಾ 37.1 ಓವರ್ಗಳಲ್ಲಿ 189 ರನ್ಗಳಿಗೆ ಆಲೌಟ್ ಆಯಿತು. ಆ ಮೂಲಕ ಅತಿಥೇಯ ಶ್ರೀಲಂಕಾ 26 ರನ್ಗಳಿಂದ(DLS ನಿಯಮದನ್ವಯ) ಗೆಲುವು ಸಾಧಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು 1-1ರ ಸಮಬಲ ಸಾಧಿಸಿವೆ.
ಲಂಕಾ ಸಂಘಟಿತ ಬ್ಯಾಟಿಂಗ್:
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಗುಣತಿಲಕ(18) ಹಾಗೂ ನಿಸ್ಸಂಕಾ(14) ಬಹುಬೇಗನೆ ನಿರ್ಗಮಿಸಿದರು. ನಂತರ 3ನೇ ವಿಕೆಟ್ಗೆ ಜೊತೆಯಾದ ಕುಸಲ್ ಮೆಂಡಿಸ್(36) ಮತ್ತು ಧನಂಜಯ ಡಿಸಿಲ್ವಾ(34) ಉಪಯುಕ್ತ 61 ರನ್ಗಳ ಜೊತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಇವರಿಬ್ಬರ ಬಳಿಕ ಕಣಕ್ಕಿಳಿದ ಅಸಲಂಕ(13), ನಾಯಕ ಶಣಕ(34), ಕರುಣಾರತ್ನೆ(18), ವೆಲ್ಲಲಾಗೆ(20), ವಂಡರ್ಸೆ(7), ಚಮೀರಾ(7*) ಮತ್ತು ತೀಕ್ಷಣ(11*) ಉಪಯುಕ್ತ ರನ್ಗಳಿಸಿದರು. ಈ ಹಂತದಲ್ಲಿ ಪಂದ್ಯಕ್ಕೆ ಮಳೆ ಅಡ್ಡಪಡಿಸಿದ ಪರಿಣಾಮ ಶ್ರೀಲಂಕಾ ತಂಡದ ಇನ್ನಿಂಗ್ಸ್ ಅನ್ನು 47.4 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಪರಿಣಾಮ ಅತಿಥೇಯ ಶ್ರೀಲಂಕಾ, 220 ರನ್ಗಳಿಗೆ ತನ್ನ ಇನಿಂಗ್ಸ್ ಮುಕ್ತಾಯಗೊಳಿಸಿತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್(4/35) ಅದ್ಭುತ ಬೌಲಿಂಗ್ನಿಂದ ಮಿಂಚಿದರೆ. ಕುನ್ನೆಮನ್, ಮ್ಯಾಕ್ಸ್ವೆಲ್ ತಲಾ 2 ಹಾಗೂ ಸ್ವೀಪ್ಸನ್ 1 ವಿಕೆಟ್ ಪಡೆದರು.
ಆಸೀಸ್ ಬ್ಯಾಟಿಂಗ್ ವೈಫಲ್ಯ:
ಡಕ್ವರ್ಥ್ ನಿಯಮದ ಪ್ರಕಾರ 43 ಓವರ್ಗಳಲ್ಲಿ 216 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್(37) ಉಪಯುಕ್ತ ರನ್ಗಳಿಸಿದರೆ. ನಾಯಕ ಆರನ್ ಫಿಂಚ್(14), ಸ್ಟೀವ್ ಸ್ಮಿತ್(28) ಹಾಗೂ ಟ್ರಾವಿಸ್ ಹೆಡ್(23) ತಂಡಕ್ಕೆ ಆಸರೆಯಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬಂದ ಲಬುಸ್ಚೆಗ್ನೆ(18), ಅಲೆಕ್ಸ್ ಕ್ಯಾರಿ(15) ಸಹ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಮೊದಲ ಪಂದ್ಯದ ಹೀರೋ ಗ್ಲೆನ್ ಮ್ಯಾಕ್ಸ್ವೆಲ್(30) ರನ್ಗಳಿಸಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕೆಳ ಕ್ರಮಾಂಕದಲ್ಲಿ ಬಂದ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಪರಿಣಾಮ ಆಸೀಸ್ 189 ರನ್ಗಳಿಗೆ ಆಲೌಟ್ ಆಯಿತು. ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಶ್ರೀಲಂಕಾ ಪರ, ಕರುಣಾರತ್ನೆ 3 ವಿಕೆಟ್ ಪಡೆದು ಮಿಂಚಿದರೆ. ಚಮಿರಾ, ಧನಂಜಯ ಡಿಸಿಲ್ವಾ ಹಾಗೂ ವೆಲ್ಲಲಾಗೆ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಶ್ರೀಲಂಕಾ ಪರ ಆಲ್ರೌಂಡ್ ಪ್ರದರ್ಶನ ನೀಡಿದ ಚಮಿಕಾ ಕರುಣಾರತ್ನೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯ ಜೂ.19ರಂದು ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.