ಇತ್ತೀಚಿಗೆ ಮುಕ್ತಾಯಗೊಂಡ ಟಿ20 ಸರಣಿ ಬಳಿಕ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಏಕದಿನ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿವೆ. ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಲಿದೆ.
ಪಲ್ಲೆಕೆಲೆ ಇಂಟರ್ ನ್ಯಾಷಿನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿದೆ. ಟಿ20 ಸರಣಿಯ ಸೋಲಿನ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಶ್ರೀಲಂಕಾ, ಮೊದಲ ಏಕದಿನ ಪಂದ್ಯಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಕೊನೆಯ ಟಿ20 ಪಂದ್ಯದಲ್ಲಿ ದೊರೆತ ರೋಚಕ ಗೆಲುವು ಶ್ರೀಲಂಕಾ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಟಿ20 ಸರಣಿಯಲ್ಲಿ 2-1ರ ಗೆಲುವು ಕಂಡಿರುವ ಆಸ್ಟ್ರೇಲಿಯಾ ಇದೀಗ ಏಕದಿನ ಸರಣಿಯನ್ನು ಮುಡಿಗೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವ ಆಸೀಸ್, ಈ ಹಿಂದೆ ಪಾಕಿಸ್ತಾನದ ವಿರುದ್ದದ ಏಕದಿನ ಸರಣಿಯಲ್ಲಿ ಸೋಲಿನ ಕಹಿ ಅನುಭವಿಸಿತ್ತು. ಆದರೆ ಇದೀಗ ಹೊಸ ಜೋಶ್ನಲ್ಲಿರುವ ಆಸ್ಟ್ರೇಲಿಯಾ, ಲಂಕಾ ವಿರುದ್ಧ ಜಯದ ನಿರೀಕ್ಷೆಯಲ್ಲಿದೆ.
ಉಭಯ ತಂಡಗಳು:
ಶ್ರೀಲಂಕಾ: ಪತುಮ್ ನಿಸ್ಸಂಕಾ, ದನುಷ್ಕಾ ಗುಣತಿಲಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ಧನಂಜಯ ಡಿಸಿಲ್ವಾ, ದಸುನ್ ಶನಕಾ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಶ್ಮಂತ ಚಮೀರ, ದುನಿತ್ ವೆಲ್ಲಲಗೆ, ಮಹೀಶ್ ತೀಕ್ಷಣ.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರನ್ ಫಿಂಚ್(ನಾಯಕ), ಸ್ಟೀವ್ ಸ್ಮಿತ್, ಮಾರ್ನಸ್ ಲಬುಸ್ಚಗ್ನೆ, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟಾಯ್ನಿಸ್, ಅಲೆಕ್ಸ್ ಕ್ಯಾರಿ, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಜೇಯ್ ರಿಚರ್ಡ್ಸನ್, ಜೋಶ್ ಹೇಜಲ್ವುಡ್.