ಆರಂಭಿಕ ಬ್ಯಾಟ್ಸಮನ್ ಪತುಮ್ ನಿಸ್ಸಂಕಾ(137) ಚೊಚ್ಚಲ ಶತಕದ ಅಬ್ಬರ ಹಾಗೂ ಕುಸಲ್ ಮೆಂಡಿಸ್(87) ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 6 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿತು.
ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 291/6 ರನ್ ಕಲೆಹಾಕಿತು. ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ, ನಿಸ್ಸಂಕಾ ಹಾಗೂ ಕುಸಲ್ ಮೆಂಡಿಸ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 48.3 ಓವರ್ಗಳಲ್ಲಿ 292/4 ರನ್ ಗಳಿಸುವ ಮೂಲಕ ಗೆಲುವು ದಾಖಲಿಸಿತು. ಈ ಗೆಲುವಿನ ಮೂಲಕ ಅತಿಥೇಯ ಶ್ರೀಲಂಕಾ ಐದು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
*ಫಿಂಚ್-ಹೆಡ್ ಅದ್ಭುತ ಆಟ*
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್(9), ನಂತರ ಬಂದ ಮಿಚೆಲ್ ಮಾರ್ಷ್(10) ಸಹ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಬಳಿಕ ಕಣಕ್ಕಿಳಿದ ಲಬುಸ್ಚೆಗ್ನೆ(20) ಉಪಯುಕ್ತ ರನ್ಗಳಿಸಿ ಹೊರ ನಡೆದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ನಾಯಕ ಆರನ್ ಫಿಂಚ್ 62 ರನ್ (85 ಬಾಲ್, 4 ಬೌಂಡರಿ, 1 ಸಿಕ್ಸ್) ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಅಲೆಕ್ಸ್ ಕ್ಯಾರಿ(49) ಹಾಗೂ ಟ್ರಾವಿಸ್ ಹೆಡ್ 70* ರನ್(65 ಬಾಲ್, 3 ಬೌಂಡರಿ, 3 ಸಿಕ್ಸ್) ಉತ್ತಮ ಆಟವಾಡಿ 5ನೇ ವಿಕೆಟ್ಗೆ 72 ರನ್ಗಳ ಕಾಣಿಕೆ ನೀಡಿದರು. ಕೆಳ ಕ್ರಮಾಂಕದಲ್ಲಿ ಬಂದ ಗ್ಲೆನ್ ಮ್ಯಾಕ್ಸ್ವೆಲ್(33) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಶ್ರೀಲಂಕಾ ಪರ ವೆಂಡರ್ಸೆ 3/49 ವಿಕೆಟ್ ಪಡೆದು ಮಿಂಚಿದರೆ, ಚಮೀರಾ, ವೆಲ್ಲಲಗೆ, ಧನಂಜಯ ಡಿಸಿಲ್ವಾ ತಲಾ 1 ವಿಕೆಟ್ ಪಡೆದರು.
*ಸೆಂಚುರಿ ಸ್ಟಾರ್ ನಿಸ್ಸಂಕಾ*
ಆಸ್ಟ್ರೇಲಿಯಾ ನೀಡಿದ 292 ರನ್ಗಳ ಸವಾಲು ಬೆನ್ನತ್ತಿದ ಶ್ರೀಲಂಕಾ ಸಾಧಾರಣ ಆರಂಭ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಡಿಕ್ವೆಲ್ಲಾ(25) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ನಂತರ ಜೊತೆಯಾದ ಪತುಮ್ ನಿಸ್ಸಂಕಾ 137 ರನ್(147 ಬಾಲ್, 11 ಬೌಂಡರಿ, 2 ಸಿಕ್ಸ್) ಹಾಗೂ ಕುಸಲ್ ಮೆಂಡಿಸ್ 87 ರನ್(85 ಬಾಲ್, 8 ಬೌಂಡರಿ) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಸೀಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ, 2ನೇ ವಿಕೆಟ್ಗೆ 170 ರನ್ ಜೊತೆಯಾಟದಿಂದ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಕುಸಲ್ ಮೆಂಡಿಸ್, 85 ರನ್ ಗಳಿಸಿದ್ದ ವೇಳೆ ಗಾಯಗೊಂಡು ಹೊರನಡೆದರು. ನಂತರವೂ ಜವಾಬ್ದಾರಿಯ ಬ್ಯಾಟಿಂಗ್ ಮುಂದುವರಿಸಿದ ನಿಸ್ಸಂಕಾ, ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ನಂತರ ಬಂದ ಧನಂಜಯ(25) ರನ್ ಕಲೆಹಾಕಿದರೆ, ಶಣಕಾ(0) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಅಂತಿಮವಾಗಿ ಅಸಲಂಕ(13*) ತಂಡವನ್ನ ಗೆಲುವಿನ ದಡಸೇರಿಸಿದರು. ಆಸೀಸ್ ಪರ ರಿಚರ್ಡ್ಸನ್ 2, ಹೆಜಲ್ವುಡ್ ಮತ್ತು ಮ್ಯಾಕ್ಸ್ವೆಲ್ ತಲಾ 1 ವಿಕೆಟ್ ಪಡೆದರು.