Singapore Open: ಪದಕದ ಆಸೆ ಚಿಗುರಿಸಿದ ಸಿಂಧು ಸೆಮಿಫೈನಲ್ ಗೆ, ಜಿದ್ದು ಸೋತ ಸೈನಾ, ಪ್ರಣಯ್
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಭರ್ಜರಿ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್ ನಲ್ಲಿ ಜಯ ಸಾಧಿಸಿದ್ದು, ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಹಣಾಹಣಿಯಲ್ಲಿ ಸಿಂಧು 17-21, 21-11, 21-19ರಿಂದ ಚೀನಾದ ಹಾನ್ ಯು ಅವರನ್ನು ಒಂದು ಗಂಟೆ ಎರಡು ನಿಮಿಷದ ಹೋರಾಟದಲ್ಲಿ ಮಣಿಸಿ ಮುನ್ನಡೆದರು.

ಎರಡು ಬಾರಿ ಒಲಿಂಪಿಕ್ಸ್ ವಿಜೇತೆ ಸಿಂಧು ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ಎರಡನೇ ಹಾಗೂ ಮೂರನೇ ಗೇಮ್ ನಲ್ಲಿ ಮನಮೋಹಕ ಆಟದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಇವರು ಎರಡನೇ ಗೇಮ್ ನಲ್ಲಿ ಅಂಕಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡ ಸಿಂಧು ಜಯ ಸಾಧಿಸಿ, ಸಮಬಲ ಸಾಧಿಸಿದರು.
ಮೂರನೇ ಗೇಮ್ ನಲ್ಲಿ ಎದುರಾಳಿ ಆಟಗಾರ್ತಿ ಭಾರೀ ಮುನ್ನಡೆ ಸಾಧಿಸಿದ್ದರು. ಒಂದು ಹಂತದಲ್ಲಿ 14-9 ರಿಂದ ಸಿಂಧು ಹಿನ್ನಡೆ ಅನುಭವಿಸಿದ್ದರು. ಆದರೆ ಈ ಅವಧಿಯಲ್ಲಿ ಸತತ ಏಳು ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಅಲ್ಲದೆ ಅಂಕಗಳಿಕೆಯ ಅಂತರವನ್ನು ಹಿಗ್ಗಿಸಿಕೊಂಡರು. ಕೊನೆಯಲ್ಲಿ ಸಮಯೋಚಿತ ಆಟವಾಡಿದ ಸಿಂಧು ಗೆಲುವು ಸಾಧಿಸಿದರು.

ಲಂಡನ್ ಓಲಪಿಂಕ್ ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 13-21, 21-15, 20-22 ರಿಂದ ಜಪಾನ್ ನ ಆಯಾ ಓಹರಿ ವಿರುದ್ಧ ಒಂದು ಗಂಟೆ 3 ನಿಮಿಷಗ ಹೋರಾಟದಲ್ಲಿ ನಿರಾಸೆ ಅನುಭವಿಸಿದರು. ಮೊದಲ ಗೇಮ್ ನಲ್ಲಿ ಹಿನ್ನಡೆ ಅನುಭವಿಸಿದರೂ, ಎರಡನೇ ಗೇಮ್ ನಲ್ಲಿ ಸೈನಾ ಅಮೋಘ ಆಟದ ಪ್ರದರ್ಶನ ನೀಡಿ ಸಮಬಲ ಸಾಧಿಸಿದರು. ಮೂರನೇ ಗೇಮ್ ನಲ್ಲಿ ಹಿಡಿತ ಸಾಧಿಸಿದ್ದ ಸೈನಾ ಒಂದು ಅಂಕ ಕಲೆ ಹಾಕುವಲ್ಲಿ ವಿಫಲರಾಗಿ ಪಂದ್ಯ ಸೋತರು. ಒಂದು ಹಂತದಲ್ಲಿ 20-18ರಿಂದ ಮುನ್ನಡೆ ಸಾಧಿಸಿದ ಸೈನಾ ಸತತ ಅಂಕಗಳನ್ನು ಬಿಟ್ಟು ಕೈ ಸುಟ್ಟುಕೊಂಡರು.

ಪುರುಷರ ಸಿಂಗಲ್ಸ್ ನಲ್ಲಿ ಎಚ್.ಎಸ್ ಪ್ರಣಯ್ 21-12, 14-21, 18-21 ರಿಂದ ಜಪಾನ್ ನ ಕೊಡೈ ನರೋಕ್ ಅವರ ವಿರುದ್ಧ ನಿರಾಸೆ ಅನುಭವಿಸಿದರು.
Singapore Open, Badminton, Pv Sindhu, Saina, Prannoy, Crash Out