Shreyas Iyer – ಬೌನ್ಸರ್ ಗೆ ಅಯ್ಯರ್ ಅಯ್ಯಯೋ..! ಶಿಷ್ಯನಿಗೆ ಕೈಕೊಟ್ಟ ಗುರು..!
ಶ್ರೇಯಸ್ ಅಯ್ಯರ್… ಟೀಮ್ ಇಂಡಿಯಾದ ಭರವಸೆಯ ಯುವ ಬ್ಯಾಟ್ಸ್ ಮೆನ್. ತಾಳ್ಮೆಯ ಜೊತೆಗೆ ಆಕ್ರಮಕಾರಿಯಾಗಿ ಆಡುವ ಶ್ರೇಯಸ್ ಅಯ್ಯಸ್ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ನೆಚ್ಚಿನ ಶಿಷ್ಯ.
ಭಾರತ ಎ ತಂಡದ ನಾಯಕನಾಗಿದ್ದಾಗ ಶ್ರೇಯಸ್ ಅಯ್ಯರ್ ಗೆ ಗುರುವಾಗಿದ್ದು ರಾಹುಲ್ ದ್ರಾವಿಡ್. ಆನಂತರ 2017ರಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ ಶ್ರೇಯಸ್ ಅಯ್ಯರ್ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. 26 ಏಕದಿನ ಪಂದ್ಯಗಳಲ್ಲಿ ಒಂದು ಶತಕ ಹಾಗೂ 9 ಅರ್ಧಶತಕಗಳ ಸಹಾಯದಿಂದ 947 ರನ್ ದಾಖಲಿಸಿದ್ದಾರೆ. ಹಾಗೇ 41 ಟಿ-20 ಪಂದ್ಯಗಳಲ್ಲಿ ಆರು ಅರ್ಧಶತಕಗಳ ನೆರವಿನಿಂದ 903 ರನ್ ಗಳಿಸಿದ್ದಾರೆ.
2021ರಲ್ಲಿ ನ್ಯೂಜಿಲೆಂಡ್ ವಿರುದ್ದ ಚೊಚ್ಚಲ ಟೆಸ್ಟ್ ಪಂದ್ಯವನ್ನು ಕಾನ್ಪುರದಲ್ಲಿ ಆಡಿದ್ದರು. ಮೊದಲ ಪಂದ್ಯದಲ್ಲೇ ಶತಕ ಕೂಡ ದಾಖಲಿಸಿದ್ದರು. ಇಲ್ಲಿಯವರೆಗೆ ಐದು ಟೆಸ್ಟ್ ಪಂದ್ಯಗಳನ್ನು ಅಡಿರುವ ಶ್ರೇಯಸ್ ಅಯ್ಯರ್ ಒಂದು ಶತಕ ಹಾಗೂ ಮೂರು ಅರ್ಧಶತಕಗಳ ಸಹಾಯದಿಂದ 422 ರನ್ ಗಳಿಸಿದ್ದಾರೆ.
47ರ ಸರಾಸರಿಯಲ್ಲಿ ರನ್ ಗಳಿಸಿರುವ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾಗೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗುತ್ತಾರೆ ಎಂದೇ ಭಾವಿಸಲಾಗುತ್ತಿತ್ತು.
ಆದ್ರೆ ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭರವಸೆಗಳನ್ನು ಹುಸಿಗೊಳಿಸಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ 15 ರನ್ ಗಳಿಸಿದ್ರೆ, ಎರಡನೇ ಇನಿಂಗ್ಸ್ ನಲ್ಲಿ 19 ರನ್ ಗಳಿಸಿದ್ದಾರೆ.
ಹಾಗಂತ ಅಯ್ಯರ್ ಕಡಿಮೆ ರನ್ ಗೆ ಔಟ್ ಆಗಿದ್ದಾರೆ ಅಂತ ಟೀಕೆ ಮಾಡುತ್ತಿಲ್ಲ. ಬದಲಾಗಿ ಶ್ರೇಯಸ್ ಅಯ್ಯರ್ ಔಟಾಗಿದ್ದ ರೀತಿಗೆ ಟೀಕೆಗಳು ಕೇಳಿಬರುತ್ತಿವೆ. ಯಾಕಂದ್ರೆ ಶ್ರೇಯಸ್ ಅಯ್ಯರ್ ಅವರ ವೀಕ್ ನೆಸ್ ಏನು ಎಂಬುದು ಕ್ರಿಕೆಟ್ ಜಗತ್ತಿಗೆ ಗೊತ್ತಾಗಿಬಿಟ್ಟಿದೆ.
ಹೌದು, ಅಯ್ಯರ್ ಪದೇ ಪದೇ ಶಾರ್ಟ್ ಪಿಚ್ ಎಸೆತಗಳಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಐಪಿಎಲ್ ಸೇರಿದಂತೆ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಬೌನ್ಸರ್ ಎಸೆತಗಳು ಶ್ರೇಯಸ್ ಅಯ್ಯರ್ ಗೆ ಮಾರಕವಾಗಿ ಪರಿಣಮಿಸುತ್ತಿದೆ. ಈ ವಿಚಾರ ಅಯ್ಯರ್ ಗೂ ಗೊತ್ತಿಲ್ಲದ ವಿಚಾರೇನೂ ಅಲ್ಲ.
ಹಾಗೇ ಬೌನ್ಸರ್ ಎಸೆತಗಳಿಗೆ ಯಾವ ರೀತಿ ಬ್ಯಾಟ್ ಬೀಸಬೇಕು ಎಂಬುದರ ಬಗ್ಗೆ ಕಠಿಣ ಅಭ್ಯಾಸವನ್ನು ಮಾಡುತ್ತಿದ್ದಾರೆ. ಆದ್ರೂ ಅದು ಪ್ರಯೋಜನವಾಗುತ್ತಿಲ್ಲ. ಇದೀಗ ಈ ಸಮಸ್ಯೆಯನ್ನು ಬಗೆ ಹರಿಸಲು ಅಯ್ಯರ್ ಅವರು ದ್ರಾವಿಡ್ ಗರಡಿಯಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾಗಬೇಕಿದೆ.
ಇನ್ನೊಂದೆಡೆ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕ್ರೀಸ್ ಗೆ ಆಗಮಿಸುತ್ತಿದ್ದಂತೆ ಒಬ್ಬ ವ್ಯಕ್ತಿ ಪೆವಿಲಿಯನ್ ನಲ್ಲೇ ಕುಳಿತುಕೊಂಡು ರಣತಂತ್ರ ರೂಪಿಸಿದ್ದರು.
ಅದು ಮತ್ಯಾರು ಅಲ್ಲ. ಇಂಗ್ಲೆಂಡ್ ನ ಹೆಡ್ ಕೋಚ್ ಬ್ರೆಂಡನ್ ಮೆಕಲಮ್.
ಹಾಗೇ ನೋಡಿದ್ರೆ ಬ್ರೆಂಡನ್ ಮೆಕಲಮ್ ಅವರು ಅಯ್ಯರ್ ಅವರ ಕೋಚ್ ಕೂಡ ಆಗಿದ್ದರು. ಕೆಕೆಆರ್ ತಂಡದ ನಾಯಕನಾಗಿದ್ದ ಅಯ್ಯರ್ ಗೆ ಈ ಬಾರಿಯ ಐಪಿಎಲ್ ನಲ್ಲಿ ಮೆಕಲಂ ಮುಖ್ಯತರಬೇತುದಾರನಾಗಿದ್ದರು. Shreyas Iyer – Shreyas’s bouncer woes put his Test future in jeopardy
ಹೀಗಾಗಿ ಮೆಕಲಮ್ ಗೆ ಮೊದಲೇ ಗೊತ್ತಿತ್ತು. ಶ್ರೇಯಸ್ ಅಯ್ಯರ್ ವೀಕ್ ನೆಸ್ ಏನು ಎಂಬುದು. ಅದಕ್ಕಾಗಿಯೇ ಅಯ್ಯರ್ ಕ್ರೀಸ್ ಗೆ ಆಗಮಿಸುತ್ತಿದ್ದಂತೆ ಇಂಗ್ಲೆಂಡ್ ತಂಡಕ್ಕೆ ಶಾರ್ಟ್ ಪಿಚ್ ಎಸೆತಗಳನ್ನು ಹಾಕುವಂತೆ ಸನ್ನೆ ಮಾಡಿದ್ದಾರೆ.
ಹೆಡ್ ಕೋಚ್ ಪ್ಲಾನ್ ನಂತೆ ಬೌಲಿಂಗ್ ಮಾಡಿದ್ದ ಮ್ಯಾಟ್ ಪೋಟ್ಸ್ ಅವರು ಅಯ್ಯರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ಮೊದಲ ಇನಿಂಗ್ಸ್ ನಲ್ಲಿ ಜೇಮ್ಸ್ ಆಂಡರ್ಸನ್ ಗೆ ವಿಕೆಟ್ ಒಪ್ಪಿಸಿದ್ದರು.
ಒಟ್ಟಿನಲ್ಲಿ ಶ್ರೇಯಸ್ ಅಯ್ಯರ್ ತನ್ನ ವೀಕ್ ನೆಸ್ ಅನ್ನು ಸರಿಪಡಿಸಿಕೊಳ್ಳದೇ ಇದ್ರೆ ಟೀಮ್ ಇಂಡಿಯಾದಿಂದ ಹೊರಗುಳಿಯುವ ಗ್ಯಾರಂಟಿ. ಆದ್ರೆ ಶ್ರೇಯಸ್ ಅಯ್ಯರ್ ನಂತಹ ಆಟಗಾರನಿಗೆ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದು ಕಷ್ಟವೇನೂ ಆಗಲ್ಲ. ಯಾಕಂದ್ರೆ ಅಯ್ಯರ್ ತಾಂತ್ರಿಕವಾಗಿ ಪರಿಪಕ್ವಗೊಳ್ಳುತ್ತಿರುವ ಆಟಗಾರನಾಗಿದ್ದಾರೆ.