IND Vs ENG – ಸೋಲಿನ ಭೀತಿಯಲ್ಲಿರುವ ಟೀಮ್ ಇಂಡಿಯಾವನ್ನು ಕಾಪಾಡೋದು ಯಾರು…?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೂರು ದಿನ ಟೀಮ್ ಇಂಡಿಯಾದ್ದೇ ಕಾರುಬಾರು.
ಮೊದಲ ದಿನ ರಿಷಬ್ ಪಂತ್ ಆಕರ್ಷಕ ಶತಕ ಸಿಡಿಸಿ ಇಡೀ ವಿಶ್ವ ಕ್ರಿಕೆಟ್ ನ ಗಮನ ಸೆಳೆದ್ರು. ಅಲ್ಲದೆ ರವೀಂದ್ರ ಜಡೇಜಾ ಜೊತೆ 222 ರನ್ ಗಳ ಜೊತೆಯಾಟವನ್ನು ಆಡಿ ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾವನ್ನು ಪಾರು ಮಾಡಿದ್ದರು.
ಎರಡನೇ ದಿನ ರವೀಂದ್ರ ಜಡೇಜಾ ಶತಕ ಸಿಡಿಸಿ ಮತ್ತೆ ಸದ್ದು ಮಾಡಿದ್ರು. ಜೊತೆಗೆ ನಾಯಕ ಜಸ್ಪ್ರಿತ್ ಬೂಮ್ರಾ ಒಂದೇ ಓವರ್ ನಲ್ಲಿ 35 ರನ್ ದಾಖಲಿಸಿ ದಾಖಲೆಯನ್ನೇ ಬರೆದ್ರು.
ಮೂರನೇ ದಿನ ಟೀಮ್ ಇಂಡಿಯಾ ಬೌಲರ್ ಗಳು ಮೇಲುಗೈ ಸಾಧಿಸಿದ್ರು. ಹಾಗೇ ವಿರಾಟ್ ಮತ್ತು ಜಾನಿಬೇರ್ ಸ್ಟೋವ್ ನಡುವಿನ ಮಾತಿನ ಸಮರ ಪಂದ್ಯದ ಗತಿಯನ್ನೇ ಬದಲಾಯಿಸಿತ್ತು. ವಿರಾಟ್ ಮಾತಿನಿಂದ ಸಿಟ್ಟುಗೊಂಡ ಜಾನಿ ಬೇರ್ ಸ್ಟೋವ್ ಸ್ಪೋಟಕ ಆಟವನ್ನಾಡಿದ್ರು. ಪರಿಣಾಮ ಇಂಗ್ಲೆಂಡ್ ಭಾರತದ ಸವಾಲಿಗೆ ದಿಟ್ಟ ಉತ್ತರವನ್ನೇ ನೀಡಿತ್ತು.
ಆದ್ರೆ 132 ರನ್ ಗಳ ಮುನ್ನಡೆ ಪಡೆದುಕೊಂಡ ಟೀಮ್ ಇಂಡಿಯಾಗೆ ನಾಲ್ಕನೇ ದಿನ ಪೂಜಾರ ಮತ್ತು ಪಂತ್ ಆಸರೆಯಾಗುತ್ತಾರೆ ಎಂಬ ನಂಬಿಕೆ ಇತ್ತು.
ಆದ್ರೆ ಇಂಗ್ಲೆಂಡ್ ಬೌಲರ್ ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಭಾರತ ತಂಡ ಎರಡನೇ ಇನಿಂಗ್ಸ್ ನಲ್ಲಿ 245 ರನ್ ಗಳಿಗೆ ಆಲೌಟ್ ಆಯ್ತು.
ಗೆಲ್ಲಲು 378 ರನ್ ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್ ನಲ್ಲಿ ಅದ್ಭುತ ಆಟವನ್ನೇ ಆಡಿತ್ತು. ಆರಂಭಿಕರಾದ ಆಲೆಕ್ಸ್ ಲೀಸ್ ಮತ್ತು ಝಾಕ್ ಕ್ರಾವ್ಲೆ ಮೊದಲ ವಿಕೆಟ್ ಗೆ 107 ರನ್ ಪೇರಿಸಿದ್ರು. ಈ ಹಂತದಲ್ಲಿ ಬೂಮ್ರಾ ಪರಿಣಾಮಕಾರಿಯಾದ್ರು. ಅಲೆಕ್ಸ್ ರನೌಟ್ ಅದ್ರೆ, ಝಾಕ್ ಮತ್ತು ಶೂನ್ಯ ಸುತ್ತಿದ್ದ ಒಲಿವ್ ಪೋಪ್ ಬೂಮ್ರಾಗೆ ವಿಕೆಟ್ ಒಪ್ಪಿಸಿದ್ರು.
ನಂತರ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದು ಜಾಯ್ ರೂಟ್ ಮತ್ತು ಜಾನಿ ಬೇರ್ ಸ್ಟೋವ್. ನಾಲ್ಕನೇ ವಿಕೆಟ್ ಗೆ ಅಜೇಯ 150 ರನ್ ಪೇರಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸುವ ಹಾದಿಯಲ್ಲಿದ್ದಾರೆ.
ಜಾಯ್ ರೂಟ್ ಅಜೇಯ 76 ರನ್ ಹಾಗೂ ಜಾನಿ ಬೇರ್ ಸ್ಟೋವ್ ಅಜೇಯ 72 ರನ್ ಗಳೊಂದಿಗೆ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಂದ್ಯದ ಅಂತಿಮ ದಿನ ಇಂಗ್ಲೆಂಡ್ ಗೆಲ್ಲಲು ಬೇಕಾಗಿರುವುದು 119 ರನ್. ಕೈಯಲ್ಲಿ ಏಳು ವಿಕೆಟ್ ಗಳಿವೆ. ಹೀಗಾಗಿ ಟೀಮ್ ಇಂಡಿಯಾ ಸೋಲಿನ ಭೀತಿಯಲ್ಲಿದೆ. ಮೂರು ದಿನಗಳ ಕಾಲ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ನಾಲ್ಕನೇ ದಿನ ಹಿಡಿತವನ್ನು ಕಳೆದುಕೊಂಡಿದೆ.
ಇದೀಗ ಐದನೇ ದಿನ ಟೀಮ್ ಇಂಡಿಯಾ ಕಮ್ ಬ್ಯಾಕ್ ಮಾಡಲೇಬೇಕಿದೆ. ಅದರಲ್ಲೂ ಬೌಲರ್ ಗಳು ನಿರ್ಣಾಯಕ ಪಾತ್ರ ವಹಿಸಬೇಕಿದೆ. ಇನ್ನೊಂದೆಡೆ ಟೀಮ್ ಇಂಡಿಯಾಗೆ ವರುಣದೇವ ಅಭಯ ಕೂಡ ಜಾಸ್ತಿ ಏನು ಇಲ್ಲ. ಪಂದ್ಯಕ್ಕೆ ತುಸು ಮಟ್ಟಿಗೆ ಮಳೆರಾಯ ಅಡ್ಡಿಯನ್ನುಂಟು ಮಾಡಿದ್ರೂ ಹವಮಾನ ಇಲಾಖೆಯ ಪ್ರಕಾರ ಐದನೇ ದಿನ ಮಳೆ ಬರೋದು ಕೇವಲ ನಾಲ್ಕು ಪರ್ಸೆಂಟ್ ಮಾತ್ರ ಸಾಧ್ಯತೆ ಇದೆ. IND Vs ENG -Can rain save India’s blushes at Edgbaston on Tuesday?
ಒಟ್ಟಿನಲ್ಲಿ 2021ರ ಸರಣಿಯಲ್ಲಿ 2-1ರಿಂದ ಮುನ್ನಡೆಯಲ್ಲಿದ್ದ ಟೀಮ್ ಇಂಡಿಯಾ ಇದೀಗ 15 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲುವ ಕನಸು ಭಗ್ನಗೊಳ್ಳುವ ಸಾಧ್ಯತೆಗಳಿವೆ.
ಆದ್ರೆ ಕ್ರಿಕೆಟ್ ಆಟದಲ್ಲಿ ಏನು ಬೇಕಾದ್ರೂ ಆಗಬಹುದು. ಹಾಗೇ ಟೀಮ್ ಇಂಡಿಯಾದ ಬೌಲರ್ ಗಳು ಅದ್ಭುತವಾದ ಬೌಲಿಂಗ್ ಪ್ರದರ್ಶನ ನೀಡಿದ್ರೆ ಪಂದ್ಯವನ್ನು ಗೆಲ್ಲಬಹುದು. ಒಟ್ಟಿನಲ್ಲಿ ಐದನೇ ಟೆಸ್ಟ್ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಬರೋದು ಖಚಿತ.