ಅತಿಥೇಯ ವೆಸ್ಟ್ ಇಂಡೀಸ್(West Indies) ವಿರುದ್ಧದ ಮೊದಲ ಏಕದಿನ(ODI Match) ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶಿಖರ್ ಧವನ್(Shikar Dhawan) ಕೇವಲ 3 ರನ್ಗಳ ಅಂತರದಿಂದ ಶತಕ ವಂಚಿತರಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಹಲವು ತಿಂಗಳು ಟೀಂ ಇಂಡಿಯಾ(Team India)ದಿಂದ ಹೊರಗುಳಿದಿದ್ದ ಶಿಖರ್ ಧವನ್, ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ODI ಸರಣಿಯ ಮೂಲಕ ತಂಡಕ್ಕೆ ಮರಳಿದ್ದರು. ಆದರೆ ನಿರೀಕ್ಷಿತ ಬ್ಯಾಟಿಂಗ್ ಮೂಲಕ ಅಬ್ಬರಿಸುವಲ್ಲಿ ವಿಫಲವಾಗಿದ್ದರು. ಆದರೆ ಕೆರೆಬಿಯನ್ನರ ವಿರುದ್ಧದ ಮೊದಲ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಧವನ್, ಟೀಂ ಇಂಡಿಯಾಕ್ಕೆ ಬೆನ್ನೆಲುಬಾಗಿ ನಿಂತರು. ಉತ್ತಮ ಬ್ಯಾಟಿಂಗ್ ಮೂಲಕ ಶತಕದತ್ತ ಮುಖ ಮಾಡಿದ್ದ ಧವನ್, ಕೇವಲ 3 ರನ್ಗಳಿಂದ ಶತಕ ವಂಚಿತರಾಗಿ ಪೆವಿಲಿಯನ್ ಸೇರಿದರು. 2019ರ ಏಕದಿನ ವಿಶ್ವಕಪ್ನಲ್ಲಿ ಓವಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 117 ರನ್ಗಳಿಸುವ ಮೂಲಕ ಶತಕ ಬಾರಿಸಿ ಮಿಂಚಿದರು.
ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದ ಕ್ಯಾಪ್ಟನ್ ಆಗಿರುವ ಶಿಖರ್ ಧವನ್, ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಧವನ್, ವೆಸ್ಟ್ ಇಂಡೀಸ್ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದರು. ಧವನ್ ಮತ್ತು ಶುಭ್ಮನ್ ಗಿಲ್ ಮೊದಲ ವಿಕೆಟ್ಗೆ 119 ರನ್ಗಳಿಸಿ ಟೀಂ ಇಂಡಿಯಾಕ್ಕೆ ಸುಭದ್ರ ಅಡಿಪಾಯ ಹಾಕಿಕೊಟ್ಟರು.
ಜವಾಬ್ದಾರಿಯ ಬ್ಯಾಟಿಂಗ್ನಿಂದ 99 ಬಾಲ್ಗಳಲ್ಲಿ 97 ರನ್ಗಳಿಸಿದ್ದ ವೇಳೆ ಧವನ್, 35ನೇ ಓವರ್ನಲ್ಲಿ ಔಟಾಗಿ ನಿರಾಸೆ ಅನುಭವಿಸಿದರು. ಇದರೊಂದಿಗೆ ವೆಸ್ಟ್ ಇಂಡೀಸ್ ನೆಲದಲ್ಲಿ ಕ್ಯಾಪ್ಟನ್ ಆಗಿ ಶತಕ ಸಿಡಿಸಿದ ಭಾರತದ 3ನೇ ಆಟಗಾರನಾಗುವ ಅವಕಾಶ ಕಳೆದುಕೊಂಡರು. ಈ ಹಿಂದೆ ವಿರಾಟ್ ಕೊಹ್ಲಿ ಹಾಗೂ ರಾಹುಲ್ ದ್ರಾವಿಡ್ ಅವರುಗಳು ಕೆರೆಬಿಯನ್ ಅಂಗಳದಲ್ಲಿ ನಾಯಕರಾಗಿ ಶತಕ ಸಿಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ವಿಂಡೀಸ್ ನೆಲದಲ್ಲಿ ಶತಕ ಬಾರಿಸಿದ ಕ್ಯಾಪ್ಟನ್ಗಳು
ವಿರಾಟ್ ಕೊಹ್ಲಿ – 4 (2013, 2017 & 2019)
ರಾಹುಲ್ ದ್ರಾವಿಡ್ – 1 (2006)