IPL 2022ರ ಆವೃತ್ತಿಗೆ ಎಲ್ಲಾ ತಂಡಗಳು ಸಿದ್ಧವಾಗುತ್ತಿವೆ. 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿವೆ. ಇನ್ನೇನಿದ್ದರೂ ಮೈದಾನದಲ್ಲಿ ಬಲಾಬಲ ತೋರಿಸಲು ವೇದಿಕೆ ಸಿದ್ಧವಾಗಬೇಕಿದೆ ಅಷ್ಟೇ. ಈ ಮಧ್ಯೆ ಕೆಲವೊಂದು ಫ್ರಾಂಚೈಸಿಗಳಲ್ಲಿ ಕ್ಯಾಪ್ಟನ್ಸಿ ಗೊಂದಲವಿದೆ. ಆರ್ಸಿಬಿ, ಪಂಜಾಬ್ ಮತ್ತು ಕೆಕೆಆರ್ ತಂಡಗಳು ತಮ್ಮ ನಾಯಕ ಯಾರು ಎಂಬುದನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.
ಈ ಮಧ್ಯೆ ಪಂಜಾಬ್ ಕಿಂಗ್ಸ್ ಅನುಭವಿ ಆಟಗಾರ ಶಿಖರ್ ಧವನ್ ಅವರನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆ ಇದೆ. ಪಂಜಾಬ್ ಮಯಾಂಕ್ ಅಗರ್ವಾಲ್ ಅವರನ್ನು ರಿಟೈನ್ ಮಾಡಿಕೊಂಡಿತ್ತು. ಹೀಗಾಗಿ ಮಯಾಂಕ್ ಪಂಜಾಬ್ ನಾಯಕ ಎಂದೇ ಹೇಳಲಾಗಿತ್ತು. ಆದರೆ ಹರಾಜಿನಲ್ಲಿ ಶಿಖರ್ ಧವನ್ರನ್ನು ಖರೀದಿ ಮಾಡಿದ ಮೇಲೆ ಪಂಜಾಬ್ ಧವನ್ಗೆ ನಾಯಕ ಪಟ್ಟ ಕಟ್ಟುವ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಮಯಾಂಕ್ ಅವರನ್ನು ಕೆಲ ಸೀಸನ್ಗಳಿಗೆ ಉಪನಾಯಕನ್ನಾಗಿ ಮಾಡುವ ಸಾಧ್ಯತೆಗಳಿವೆ.
ಕಳೆದ ಎರಡು ಸೀಸನ್ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್, ಈ ಬಾರಿ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ನ ನಾಯಕರಾಗಿದ್ದಾರೆ. ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶಿಖರ್ ಧವನ್ ಮೆಗಾ ಹರಾಜಿನಲ್ಲಿ 8.25 ಕೋಟಿ ರೂಪಾಯಿಗೆ ಬಿಡ್ ಆಗಿದ್ದರು. ಪಂಜಾಬ್ ಈಗ ಧವನ್ ಮೂಲಕ ಆಟ ಆರಂಭಿಸಲು ಸಿದ್ಧವಾಗಿದೆ ಎಂದು ಹೇಳಲಾಗಿದೆ.