ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಅವರು ಕಳೆದ ವಾರ 52 ನೇ ವಯಸ್ಸಿನಲ್ಲಿ ಥೈಲ್ಯಾಂಡ್ನಲ್ಲಿ ಸಾವನ್ನಪ್ಪಿದ್ದರು. ಇದೀಗ ಅವರ ಮೃತ ದೇಹವನ್ನು ಆಸ್ಟ್ರೇಲಿಯಾಕ್ಕೆ ರವಾನಿಸಲಾಗಿದೆ. ಥೈಲ್ಯಾಂಡ್ ವಿಮಾನ ನಿಲ್ದಾಣದ ಪ್ರಕಾರ, ವಾರ್ನ್ ಅವರ ಮೃತ ದೇಹವನ್ನು ಮಾರ್ಚ್ 10 ರಂದು ಭಾರತೀಯ ಕಾಲಮಾನ ಸಂಜೆ 6.54 ಕ್ಕೆ ರವಾನಿಸಲಾಗಿದೆ. ವಾರ್ನ್ ಅವರ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಸಹಜ ಕಾರಣ ಎಂದು ಹೇಳಿದೆ.
ಥಾಯ್ಲೆಂಡ್ನ ಕೊಹ್ ಸಮುಯಿ ದ್ವೀಪದಲ್ಲಿ ಶುಕ್ರವಾರ ನಿಧನರಾದ ವಾರ್ನ್ ಅವರ ದೇಹವನ್ನು ಭಾನುವಾರ ಸೂರತ್ ಥಾನಿಗೆ ಕೊಂಡೊಯ್ಯಲಾಯಿತು. ಸೂರತ್ ಥಾನಿಯಿಂದ ಭಾನುವಾರ ರಾತ್ರಿ ಅವರ ಪಾರ್ಥಿವ ಶರೀರ ರಾಜಧಾನಿ ಬ್ಯಾಂಕಾಕ್ ತಲುಪಿತು. ಅಲ್ಲಿಂದ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲಾಯಿತು.
ಮೆಲ್ಬೋರ್ನ್ನಲ್ಲಿ ನಡೆಯುವ ಅಂತ್ಯಕ್ರಿಯೆಯಲ್ಲಿ ಒಂದು ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ವಾರ್ನ್ಗೆ ಅಂತಿಮ ವಿದಾಯ ನೀಡಲಾಗುವುದು. ಈ ಬೀಳ್ಕೊಡುಗೆಗೆ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸಹ ಉಪಸ್ಥಿತರಿರುತ್ತಾರೆ. ವಾರ್ನ್ ಅವರ ಕುಟುಂಬವು ಅವರು ಮೊದಲು ಖಾಸಗಿಯಾಗಿ ಅಂತಿಮ ವಿಧಿವಿಧಾನಗಳನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ.
“ವಾರ್ನ್ ಗೆ ವಿದಾಯ ಹೇಳಲು ಎಂಸಿಜಿಗಿಂತ ಉತ್ತಮವಾದ ಸ್ಥಳ ಜಗತ್ತಿನಲ್ಲಿ ಇಲ್ಲ. ಇಲ್ಲಿ ಅವರು 1994 ರ ಆಶಸ್ನಲ್ಲಿ ಹ್ಯಾಟ್ರಿಕ್ ಗಳಿಸಿದ್ದರು ಮತ್ತು 2006 ರಲ್ಲಿ ಅವರ ಕೊನೆಯ ಅಂತಾರಾಷ್ಟ್ರೀಯ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ 700 ನೇ ಟೆಸ್ಟ್ ವಿಕೆಟ್ ಪಡೆದಿದ್ದರು. ವಾರ್ನ್ ಹುಟ್ಟಿದ್ದು ಮೆಲ್ಬೋರ್ನ್ನಲ್ಲಿ ಮತ್ತು ಇಲ್ಲಿಯೇ ಬೆಳೆದಿದ್ದರು” ಎಂದು ವಾರ್ನ್ನ ಮ್ಯಾನೇಜರ್ ಡೇನಿಯಲ್ ಆಂಡ್ರ್ಯೂಸ್ ಬುಧವಾರ ಟ್ವೀಟ್ ಮಾಡಿದ್ದಾರೆ:
ವಾರ್ನ್ ಅತಿ ಹೆಚ್ಚು ವಿಕೆಟ್ ಪಡೆದ ಲೆಗ್ ಸ್ಪಿನ್ನರ್
ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್ನಲ್ಲಿ 600 ಮತ್ತು 700 ವಿಕೆಟ್ಗಳ ಮೈಲಿಗಲ್ಲುಗಳನ್ನು ತಲುಪಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡರು. ಅವರು 2005 ರಲ್ಲಿ ಇಂಗ್ಲೆಂಡ್ ವಿರುದ್ಧದ ಓಲ್ಡ್ ಟ್ರಾಫರ್ಡ್ ಟೆಸ್ಟ್ನಲ್ಲಿ 600 ವಿಕೆಟ್ಗಳನ್ನು ಪೂರೈಸಿದ್ದರು. 2006ರಲ್ಲಿ ಇಂಗ್ಲೆಂಡ್ ವಿರುದ್ಧ ಮೆಲ್ಬೋರ್ನ್ನಲ್ಲಿ ವಾರ್ನ್ 700 ವಿಕೆಟ್ಗಳ ಗಡಿ ದಾಟಿದ್ದರು. ನಂತರ ಅವರ ದಾಖಲೆಯನ್ನು ಶ್ರೀಲಂಕಾದ ದಂತಕಥೆ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಮುರಿದರು. ಮುರಳಿ 800 ವಿಕೆಟ್ ಗಳಿಸಿದ್ದರು. ವಾರ್ನ್ ಈಗಲೂ ಅತಿ ಹೆಚ್ಚು ವಿಕೆಟ್ ಪಡೆದ ಲೆಗ್ ಸ್ಪಿನ್ನರ್. ಭಾರತದ ಅನಿಲ್ ಕುಂಬ್ಳೆ 619 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.