Shane Warne – ಮೂರು ಹೆಜ್ಜೆ ಗುರುತುಗಳು.. ನೂರಾರು ಕವಲು ದಾರಿಗಳು… ಸಾವಿರದೊಂದು ರಹದಾರಿಗಳು..!

ಅದು ಸೀದಾ ಸದಾ ಮೂರೇ ಮೂರು ಹೆಜ್ಜೆ.. ತೋಳ್ಬಲದ ಜೊತೆಗೆ ಮಣಿಕಟ್ಟು ಮೂಲಕ ಕೈಬೆರಳಿನಲ್ಲಿ ಚೆಂಡನ್ನು ತಿರುಗಿಸುವ ಜಾದುಗಾರ..!
ಬುಗರಿಯಂತೆ ಗಾಳಿಯಲ್ಲಿ ತೇಲಿ ಬರುವ ಎಸೆತ. ಬ್ಯಾಟ್ಸ್ ಮೆನ್ ನನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸುವ ಮಾಂತ್ರಿಕ..!
ತನ್ನ ಪ್ರತಿಭೆ, ಸಾಮಥ್ರ್ಯದ ಮೇಲೆ ಅತೀಯಾದ ಆತ್ಮವಿಶ್ವಾಸವನ್ನು ಹೊಂದಿರುವ ಹುಂಬ ಮನಸ್ಸು…ಯಾಕಂದ್ರೆ ಆತ ಬ್ಯಾಟ್ಸ್ ಮೆನ್‍ನ ಮನಸ್ಥಿತಿಯನ್ನು ಅರಿತುಕೊಳ್ಳುವ ಮ£ಃÀಶಾಸ್ತ್ರಜ್ಞ..!
ಎದುರುಗಡೆ ಯಾರೆ ಇರಲಿ.. ಅದು ಎದುರಾಳಿ ಆಟಗಾರನೇ ಇರಬಹುದು.. ಸಹ ಆಟಗಾರರನೇ ಇರಬಹುದು.. ಸವಾಲು ಅನ್ನೋದು ಆತನ ಜನ್ಮ ಸಿದ್ಧಾಂತ. ಹಾಗೇ ಇದಕ್ಕೂ ಕಾರಣವಿದೆ. ಏಕಾಗ್ರತೆಯಿಂದ ಶಸ್ತ್ರಚಿಕಿತ್ಸೆ ಮಾಡುವ ಡಾಕ್ಟರ್ ನಂತೆ ತನ್ನ ಬೌಲಿಂಗ್ ಲಯ ಮತ್ತು ನಿಖರತೆಯನ್ನು ಕಾಯ್ಡುಕೊಳ್ಳುವ ಸ್ಪಿನ್ ಡಾಕ್ಟರ್..!

ಸೆಕ್ಸ್.. ಶೋಕಿ..ದುಶ್ಚಟಗಳ ದಾಸ..ವಿವಾದಗಳು.. ವಾಕ್ಸಮರಗಳು.. ಆತನ ಯಶಸ್ಸಿನ ಸುತ್ತ ಅಂಟಿಕೊಂಡಿರುವ ಕಪ್ಪುಚುಕ್ಕೆಗಳು.. ತಪ್ಪು ಅಂತ ಗೊತ್ತಿದ್ರೂ ಮಾಡುವುದು ತಪ್ಪೇ..ಆದ್ರೂ ಆತನ ಸಾಧನೆಯ ಮುಂದೆ ಅದೆಲ್ಲವೂ ನಗಣ್ಯವಾಗಿರುತ್ತಿದ್ದವು. ಆದ್ರೂ ಕ್ರಿಕೆಟ್ ಜಗತ್ತು ಆತನ ಯಶಸ್ಸನ್ನು ಪಕ್ಕಕ್ಕಿಟ್ಟು ಕರೆಯುತ್ತಿದ್ದದ್ದು ಕ್ರಿಕೆಟ್ ನ ಬ್ಯಾಡ್ ಬಾಯ್…!
ಆತನ ಬೌಲಿಂಗ್ ಬತ್ತಳಿಕೆಯಲ್ಲಿದ್ದ ಅಸ್ತ್ರಗಳೇ ವಿಭಿನ್ನ. ಅದನ್ನು ಅರ್ಥಮಾಡಿಕೊಳ್ಳುವುದು ತುಂಬಾನೇ ಕಷ್ಟ. ಎದುರಾಳಿ ಬ್ಯಾಟ್ಸ್ ಮೆನ್ ಗಳ ಆತ್ಮವಿಶ್ವಾಸವನ್ನು ಕುಗ್ಗಿಸುವಂತಹ ಸಾಮಥ್ರ್ಯ ಆತನಲ್ಲಿತ್ತು. ಅದಕ್ಕಾಗಿ ಏನು ಬೇಕಾದ್ರೂ ಮಾಡುವ ಕಲೆಯೂ ಚೆನ್ನಾಗಿಯೇ ಗೊತ್ತಿತ್ತು. ಹಾಗಾಗಿಯೇ ಜಂಟಲ್ ಮ್ಯಾನ್ ಆಟದ ಜಂಟಲ್ ಮ್ಯಾನ್ ಆಟಗಾರನಲ್ಲ. ಆದ್ರೂ ಆತನನ್ನು ವಿಶ್ವದ ಸರ್ವಶ್ರೇಷ್ಠ ಸ್ಪಿನ್ನರ್ ಅಂತ ಕರೆಯಲಾಗುತ್ತದೆ. ಯಾಕಂದ್ರೆ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಗಳನ್ನು ದಿಗ್ಬ್ರಮೆಗೊಳಿಸಿದ್ದ ಮಾಂತ್ರಿಕ ಬೌಲರ್..!

ಆತನ ಸ್ವಭಾವ.. ವ್ಯಕ್ತಿತ್ವ.. ಸಾಗಿ ಬಂದ ಹಾದಿ ಎಂದಿಗೂ ರೋಲ್ ಮಾಡೆಲ್ ಆಗೋಕೆ ಸಾಧ್ಯನೇ ಇಲ್ಲ. ಆದ್ರೂ ಕ್ರಿಕೆಟ್ ಮೈದಾನದಲ್ಲಿ ಆತ ಮಾಡಿರುವ ಕರಾಮತ್ತಿನಿಂದ ಯುವ ಪೀಳಿಗೆಗೆ ಸ್ಫೂರ್ತಿಯ ಚಿಲುಮೆ. ಆತನ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡಿಕೊಂಡವರು ಅನೇಕರಿದ್ದಾರೆ. ಆತನಿಗೆ ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಗುಣಗಳಿದ್ದವು. ಹಾಗಾಗಿಯೇ ಆತ ವಿಶ್ವ ಕ್ರಿಕೆಟ್ ನ ಎವರ್ ಗ್ರೀನ್ ಹೀರೋ…! He took the world for a spin and world loved him back
ಆತ ಚೆಂಡನ್ನು ಕೈ ಬೆರಳಿನಲ್ಲೇ ಆಡಿಸುವ ಮೋಡಿಗಾರ. ಏರಿಳಿತಗಳ ನಡುವೆಯೇ ಯಶಸ್ಸಿನ ಉತ್ತುಂಗಕ್ಕೇರಿದ್ದ ಅತ್ಯದ್ಭುತ ಬೌಲರ್. ಕವಲು ದಾರಿಯ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ಬಂದ ಚಾಣಕ್ಯ. ಮೂರು ಹೆಜ್ಜೆಗಳನ್ನು ಹಾಕೊಂಡು 22 ಯಾರ್ಡ್ ನ ಪಿಚ್ ನಲ್ಲಿ ಮಾಡಿರುವ ಮೋಡಿಯನ್ನು ಎಂದೆಂದೂ ಕ್ರಿಕೆಟ್ ಜಗತ್ತು ಮರೆಯುವುದಿಲ್ಲ. ಆದಕ್ಕಾಗಿಯೇ ಆತ ಈ ಶತಮಾನದ ಸರ್ವಶ್ರೇಷ್ಠ ಸ್ಪಿನ್ನರ್.
ಕವಲುದಾರಿಯನ್ನು ರಹದಾರಿಯನ್ನಾಗಿಸಿಕೊಂಡು ಪ್ರತಿ ವಿಕೆಟ್ ಗಳನ್ನು ಒಂದೊಂದು ಮೈಲುಗಲ್ಲಾಗಿಸಿಕೊಂಡಿದ್ದ. ಅದು ಸಾವಿರದೊಂದು ತಲುಪುವಷ್ಟರಲ್ಲಿ ಕ್ರಿಕೆಟ್ ಸಾಕು ಅಂತ ಆತನಿಗೆ ಅನ್ನಿಸಿಬಿಟ್ಟಿತ್ತು. ಅದಕ್ಕೊಂದು ಸಲಾಂ ಹೊಡೆದು ತನ್ನ ಎರಡನೇ ಇನಿಂಗ್ಸ್ ನ ಬದುಕನ್ನು ಚೆನ್ನಾಗಿಯೇ ಎಂಜಾಯ್ ಮಾಡುತ್ತಿದ್ದ. ಮೈದಾನದಲ್ಲಿ ವಿಕೆಟ್ ಪಡೆದ ಹಾಗೇ ವಿದಾಯದ ನಂತರ ಒಂದೊಂದು ದುಶ್ಚಟಗಳನ್ನು ಹವ್ಯಾಸವನ್ನಾಗಿಸಿಕೊಂಡ. ಆರೋಗ್ಯದ ಕಡೆ ಗಮನ ಹರಿಸಲಿಲ್ಲ. ಅಷ್ಟರಲ್ಲೇ ವಿಧಿಯ ಆಟಕ್ಕೆ ಈ ಲೋಕವನ್ನೇ ಬಿಟ್ಟು ಹೋದ ಈ ಮಹಾನ್ ಕ್ರಿಕೆಟಿಗ.
ಹೌದು, ಶೇನ್ ವಾರ್ನ್..! ಮೂರು ಹೆಜ್ಜೆ ಗುರುತುಗಳು.. ನೂರಾರು ಕವಲು ದಾರಿಗಳು… ಸಾವಿರದೊಂದು ರಹದಾರಿಗಳು..! ಇನ್ನು ನೆನಪು ಮಾತ್ರ.