ಬಾಂಗ್ಲಾದೇಶ(Bangladesh) ತಂಡದ ಪ್ರಮುಖ ಆಲ್ರೌಂಡರ್ ಶಕೀಬ್ ಅಲ್ ಹಸನ್, ಭಾರತದ(Team India) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. ಟೀಂ ಇಂಡಿಯಾ ವಿರುದ್ಧ ಭಾನುವಾರ ಢಾಕಾದಲ್ಲಿ ನಡೆದ ಮೊದಲ ಏಕದಿನ(First ODI) ಪಂದ್ಯದಲ್ಲಿ ಶಕೀಬ್, ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರು.
ಭಾರತದ ಬ್ಯಾಟಿಂಗ್ ಬೆನ್ನೆಲು ಮುರಿದ ಆಲ್ರೌಂಡರ್ 10 ಓವರ್ನಲ್ಲಿ 2 ಮೇಡನ್ ಸಹಿತ 36 ರನ್ಗಳಿಗೆ 5 ವಿಕೆಟ್ ಪಡೆದು ಮಿಂಚಿದರು. ಆ ಮೂಲಕ ಭಾರತದ ವಿರುದ್ಧ ಪಂದ್ಯವೊಂದರಲ್ಲಿ 5 ವಿಕೆಟ್ ಪಡೆದ ಬಾಂಗ್ಲಾದೇಶದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ ಟೀಂ ಇಂಡಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 5 ವಿಕೆಟ್ ಪಡೆದ 8ನೇ ಸ್ಪಿನರ್ ಎನಿಸಿದರು.
ಭಾರತದ ವಿರುದ್ಧ ಈವರೆಗೂ ಮುಷ್ತಾಕ್ ಅಹ್ಮದ್, ಸಕ್ಲೇನ್ ಮುಷ್ತಾಕ್, ಮುತ್ತಯ್ಯ ಮುರಳೀಧರನ್, ಆಶ್ಲೆ ಜೇಲ್ಸ್, ಅಜಂತಾ ಮೆಂಡಿಸ್, ಸಹೀದ್ ಅಜ್ಮಲ್, ಅಖಿಲ ಧನಂಜಯ ಅವರುಗಳು 5 ವಿಕೆಟ್ ಪಡೆದುಕೊಂಡಿದ್ದು, ಇದೀಗ ಈ ಸಾಲಿಗೆ ಶಕೀಬ್ ಅಲ್ ಹಸನ್ ಸೇರ್ಪಡೆಗೊಂಡಿದ್ದಾರೆ. ತಮ್ಮ ಮೊದಲ ಓವರ್ನಿಂದಲೇ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಶಕೀಬ್, ಭಾರತ ತಂಡದ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಥಾಕೂರ್ ಹಾಗೂ ದೀಪಕ್ ಚಹರ್ ವಿಕೆಟ್ ಪಡೆದರು.
ಇವರಿಗೆ ಉತ್ತಮ ಸಾಥ್ ನೀಡಿದ ಎಬ್ದೂತ್ ಹೊಸೈನ್(4/47) ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಇದರ ಪರಿಣಾಮ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ, ಕೆ.ಎಲ್. ರಾಹುಲ್(73) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನಡುವೆಯೂ 41.2 ಓವರ್ಗಳಲ್ಲಿ 186 ರನ್ಗಳಿಗೆ ಆಲೌಟ್ ಆಯಿತು.