ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮೆಹದಿ ಹಸನ್(38*) ಹಾಗೂ ಮುಸ್ತಫಿಜ಼ರ್(10*) ಅವರ ಕೆಚ್ಚೆದೆಯ ಹೋರಾಟದ ಪರಿಣಾಮ ಟೀಂ ಇಂಡಿಯಾ(Team India) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ(Bangladesh) 1 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.
ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಮೂರು ಪಂದ್ಯಗಳ ODI ಸರಣಿಯ ಮೊದಲ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ಲೆಕ್ಕಾಚಾರದಂತೆ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಬಾಂಗ್ಲಾ ಬೌಲರ್‌ಗಳು, ಪ್ರವಾಸಿ ಭಾರತ ತಂಡವನ್ನ 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ, 46ನೇ ಓವರ್‌ನಲ್ಲಿ 187/9 ರನ್‌ಗಳಿಸುವ ಮೂಲಕ 1 ವಿಕೆಟ್‌ಗಳ ಅದ್ಭುತ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಬಾಂಗ್ಲಾ ತಂಡ ಮೂರು ಪಂದ್ಯಗಳ ODI ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೆಹದಿ-ಮುಸ್ತಫಿಜು಼ರ್ ಕಮಾಲ್:
ಟೀಂ ಇಂಡಿಯಾದ 187 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಬಾಂಗ್ಲಾ ತಂಡ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕನಾಗಿ ಕಣಕ್ಕಿಳಿದ ಶ್ಯಾಂಟೊ(0) ಇನ್ನಿಂಗ್ಸ್‌ನ ಮೊದಲ ಬಾಲ್‌ನಲ್ಲೇ ಔಟಾಗಿ ನಿರಾಸೆ ಅನುಭವಿಸಿದರು. ಇದಾದ ಕೆಲವೇ ರನ್‌ಗಳ ಅಂತರದಲ್ಲಿ ಅನ್ಮುಲ್(14) ಸಹ ಪೆವಿಲಿಯನ್ ಸೇರಿದರು. ಈ ವೇಳೆ ಜೊತೆಯಾದ ನಾಯಕ ಲಿಟನ್ ದಾಸ್(41) ಹಾಗೂ ಶಕೀಬ್ ಅಲ್ ಹಸನ್(29) 3ನೇ ವಿಕೆಟ್‌ಗೆ 48 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಬಂದ ಮುಶ್ಫಿಕರ್ ರಹೀಮ್(18), ಮಹಮದುಲ್ಲಾ(14), ಅಫಿಫ್ ಹುಸೈನ್(6), ಎಬ್ದೂತ್ ಹೊಸೈನ್(0) ಹಾಗೂ ಹಸನ್ ಮಮೂದ್(0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಪರಿಣಾಮ 136 ರನ್‌ಗಳಿಗೆ 9 ವಿಕೆಟ್‌ಗಳನ್ನ ಕಳೆದುಕೊಂಡ ಬಾಂಗ್ಲಾದೇಶ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ ನಂತರ ಜೊತೆಯಾದ ಮೆಹದಿ ಹಸನ್(38*) ಹಾಗೂ ಮುಸ್ತಫಿಜ಼ರ್(10*) ಪಂದ್ಯದ ದಿಕ್ಕನ್ನೇ ಬದಲಿಸಿದರು. ಭಾರತದ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಈ ಜೋಡಿ 10ನೇ ವಿಕೆಟ್‌ಗೆ ಅಜೇಯ 51 ರನ್‌ಗಳಿಸಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಭಾರತದ ಪರ ಸಿರಾಜ್ 3, ಕುಲ್ದೀಪ್ ಸೆನ್ ಹಾಗೂ ಸುಂದರ್ ತಲಾ 2 ವಿಕೆಟ್ ಪಡೆದರು.
ಭಾರತಕ್ಕೆ ರಾಹುಲ್ ಆಸರೆ:
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾಗಿ ಬಂದ ರೋಹಿತ್ ಶರ್ಮ(27), ಶಿಖರ್ ಧವನ್(7) ಬಹುಬೇಗನೆ ನಿರ್ಗಮಿಸಿದರೆ. ಇವರ ಬೆನ್ನಲ್ಲೇ ವಿರಾಟ್ ಕೊಹ್ಲಿ(9) ಸಹ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಶ್ರೇಯಸ್ ಅಯ್ಯರ್(24) ಹಾಗೂ ಕೆಎಲ್ ರಾಹುಲ್(73) ತಂಡಕ್ಕೆ ಆಸರೆಯಾದರು. ಜವಾಬ್ದಾರಿಯುತ ಆಟವಾಡಿದ ಕೆಎಲ್ ರಾಹುಲ್, ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಇವರಿಬ್ಬರು ಔಟಾದ ನಂತರ ಬಂದ ಯಾರು ಸಹ ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ ಭಾರತ 186 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 36/5 ವಿಕೆಟ್ ಪಡೆದು ಮಿಂಚಿದರೆ. ಎಬ್ದೂತ್ ಹೊಸೈನ್ 47/4 ಸಹ ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಅದ್ಭುತ ಬ್ಯಾಟಿಂಗ್‌ನಿಂದ ಬಾಂಗ್ಲಾ ತಂಡಕ್ಕೆ ಗೆಲುವು ತಂದುಕೊಟ್ಟ ಮೆಹದಿ ಹಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.