ಕೊರೊನಾ ಲಸಿಕೆ ವಿರುದ್ಧ ಸೆರ್ಬಿಯಾದ ಟೆನಿಸ್ ಸ್ಟಾರ್ ನೊವಾಕ್ ಜಾಕೋವಿಕ್ ಹಠ ಹಿಡಿದಿದ್ದಾರೆ. ಜಗತ್ತಿನಲ್ಲಿ ಯಾವ ಟೂರ್ನಿಯನ್ನು ಬೇಕಾದರೂ ಕಳೆದುಕೊಳ್ಳುತ್ತೇನೆ ಆದರೆ ಲಸಿಕೆ ಮಾತ್ರ ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಜಾಕೋವಿಕ್ ಈ ಹಠ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ನಲ್ಲಿ ಅವರ ಆಟವನ್ನು ನಿಲ್ಲಿಸುವ ಅಪಾಯವಿದೆ.
ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದ ಜಾಕೋವಿಕ್ಗೆ ಆಸ್ಟ್ರೇಲಿಯನ್ ಓಪನ್ನಲ್ಲಿ ಆಡಲು ಅನುಮತಿ ನಿರಾಕರಿಸಲಾಗಿತ್ತು. ಆಸ್ಟ್ರೇಲಿಯ ವಿಮಾನ ನಿಲ್ದಾಣದಲ್ಲೇ ಜಾಕೋವಿಕ್ಗೆ ತಡೆ ಒಡ್ಡಲಾಗಿತ್ತು. ಕೋರ್ಟ್ ತೀರ್ಪಿನ ನಂತರ ಜಾಕೋ ತವರಿಗೆ ಹಿಂದುರುಗಿದ್ದರು. ಈಗ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ನಲ್ಲಿ ಆಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ. ಯಾಕಂದರೆ ಯುರೋಪಿಯನ್ ಒಕ್ಕೂಟದಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸಲು 2 ಡೋಸ್ಗಳ ಲಸಿಕೆ ಕಡ್ಡಾಯವಾಗಿದೆ. ಹೀಗಾಗಿ ಫ್ರಾನ್ಸ್ ಮತ್ತು ಬ್ರಿಟನ್ ಸರ್ಕಾರ ಜಾಕೋವಿಕ್ಗೆ ಅವಕಾಶ ನಿರಾಕರಿಸುವ ಸಾಧ್ಯತೆಗಳಿವೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಡಕ್ಕೆ ಪ್ರತಿಕ್ರಿಯಿಸಿದ ಅವರು ಬಲವಂತವಾಗಿ ಲಸಿಕೆ ಹಾಕಕಿಸಿಕೊಳ್ಳಲು ಬಯಸುವುದಿಲ್ಲ ಎಂದು ಜಾಕೋವಿಕ್ ಹೇಳುತ್ತಿದ್ದಾರೆ. ಒಂದು ವೇಳೆ ಲಸಿಕೆ ಕಡ್ಡಾಯ ಎಂದಾದರೆ ಮುಂದೆ ಟೆನಿಸ್ ಟೂರ್ನಿಗಳಿಂದ ದೂರ ಉಳಿಯಲು ಸಿದ್ಧ ಎಂದು ಹೇಳಿದ್ದಾರೆ.
ಜಾಕೀವಿಕ್ ಲಸಿಕೆ ಹಾಕಿಸಿಕೊಳ್ಳುವ ಆಂದೊಲನಕ್ಕೆ ವಿರೋಧಿಸುತ್ತಿಲ್ಲ,ಬದಲಿಗೆ ವೈಯಕ್ತಿಕ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಟ್ರೋಫಿಗಳನ್ನು ಬಿಟ್ಟುಕೊಡುವುದು ದೊಡ್ಡ ವಿಷಯವಲ್ಲ ಎಂದು ಜೋಕೊ ಹೇಳಿರುವುದು ಲಸಿಕೆಯನ್ನು ಯಾವುದೇ ಕಾರಣಕ್ಕೂ ಹಾಕಿಸಿಕೊಳ್ಳುವುದಿಲ್ಲ ಅನ್ನುವ ಹಠಕ್ಕೆ ಬಿದ್ದಂತೆ ಇದೆ. ಒಟ್ಟಿನಲ್ಲಿ ಜಾಕೋವಿಕ್ ಹಠದಿಂದ ಹಲವು ಪ್ರಶಸ್ತಿಗಳನ್ನು ಕಳೆದುಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ.