ಜೀವನದಲ್ಲಿ ಒಮ್ಮೆಯಾದರೂ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಡಬೇಕೆಂದು ಪ್ರತಿಯೊಬ್ಬ ಯುವ ಆಟಗಾರರು ಕನಸು ಕಾಣುತ್ತಾರೆ. ಇಂತದ್ದೇ ಕನಸಿನೊಂದಿಗೆ ವರ್ಷಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಸತತ ಪರಿಶ್ರಮದಿಂದ ಆಡುತ್ತಾ, ತಾಳ್ಮೆಯಿಂದ ಕಾಯುತ್ತಿದ್ದ ಆಟಗಾರನೊಬ್ಬನಿಗೆ ಕಡೆಗೂ ಭಾರತ ರಾಷ್ಟ್ರೀಯ ತಂಡದ ಬಾಗಿಲು ತೆರೆದಿದೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಸೌರಭ್ ಕುಮಾರ್, ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಲವು ವರ್ಷಗಳ ಪರಿಶ್ರಮದ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಸೌರಭ್ ಕುಮಾರ್, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ.
ಏಳು ವರ್ಷಗಳ ಹಿಂದೆ, 21 ವರ್ಷದ ಯುವಕನಾಗಿದ್ದ ಸೌರಭ್ ಕುಮಾರ್, ಕ್ರಿಕೆಟ್ ಮೇಲಿನ ಉತ್ಸಾಹವನ್ನ ಮುಂದುವರಿಸಬೇಕೋ? ಅಥವಾ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೋ? ಎಂಬ ಸಂದಿಗ್ಧತೆ ಪರಿಸ್ಥಿತಿಗೆ ಸಿಲುಕಿದ್ದರು. ಸದ್ಯ ಭಾರತೀಯ ವಾಯುಪಡೆಯಲ್ಲಿ ಸ್ಪೋರ್ಟ್ ಕೋಟಾದಲ್ಲಿ ಉದ್ಯೋಗ ಪಡೆದ ಸೌರಭ್, ಕೇಂದ್ರ ಸರ್ಕಾರದ ಉದ್ಯೋಗ ಹೊಂದಿದ್ದರು. ಆದರೆ ಇವರ ಮನಸ್ಸು ಮಾತ್ರ ಕ್ರಿಕೆಟಿಗನಾಗಿ ಟೀಂ ಇಂಡಿಯಾ ಜರ್ಸಿ ಪಡೆಯಬೇಕೆಂದು ಹಂಬಲಿಸುತ್ತಿತ್ತು. ಹೀಗಾಗಿ ಕೆಲಸ ಬಿಟ್ಟರೂ ತನ್ನ ಗುರಿ ತಲುಪುವ ಪ್ರಯತ್ನ ಬಿಡದ 28 ವರ್ಷದ ಸೌರಭ್ ಕುಮಾರ್, ಕಡೆಗೂ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಏಕೈಕ ಮಹಿಳಾ ಕ್ರಿಕೆಟ್ ದ್ರೋಣಾಚಾರ್ಯ ಎನಿಸಿರುವ ಸುನಿತಾ ಶರ್ಮ, ಗರಡಿಯಲ್ಲಿ ತರೆಬೇತಿ ಪಡೆದಿರುವ ಸೌರಭ್ ಕುಮಾರ್, ಯುಪಿ ತಂಡದ ಮಾಜಿ ವಿಕೆಟ್ ಕೇಪರ್ ಮನೋಜ್ ಮುದ್ಗಲ್, ಸೌರಭ್ ಬೆಂಬಲವಾಗಿ ನಿಂತರು. ಇದರ ಪರಿಣಾಮ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 46 ಪಂದ್ಯಗಳಲ್ಲಿ 196 ವಿಕೆಟ್ ಪಡೆಯುವ ಜೊತೆಗೆ 1572 ರನ್ಗಳಿಸಲು ನೆರವಾಯಿತು. ಎರಡು ಸೀಸನ್ನಗಳಲ್ಲಿ 51 ಮತ್ತು 44 ವಿಕೆಟ್ ಪಡೆದ ಪರಿಣಾಮ ಸೌರಭ್ಗೆ ಇರಾನಿ ಕಪ್ನಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ ಕೋವಿಡ್ ಕಾರಣದಿಂದ ಪಂದ್ಯಾವಳಿ ರದ್ದಾಯಿತು.
ಈ ನಡುವೆ ಶೇಷ ಭಾರತ ತಂಡದಲ್ಲಿ ಆಯ್ಕೆಯಾದ ಬಳಿಕ ಸೌರಭ್ ಇನ್ನಷ್ಟು ಪರಿಶ್ರಮದಿಂದ ಪ್ರಯತ್ನ ಮುಂದುವರಿಸಿದರು. ಇದರ ಫಲವಾಗಿ ಭಾರತ ʼಎʼ ತಂಡದಲ್ಲಿ ಸ್ಥಾನ ದೊರೆಯಿತಲ್ಲದೇ, ಸೌತ್ ಆಫ್ರಿಕಾಕ್ಕೆ ಹೋಗುವ ಅವಕಾಶ ಲಭಿಸಿತು. ಇಲ್ಲಿ ತೋರಿದ ಉತ್ತಮ ಪ್ರದರ್ಶನದಿಂದಾಗಿ ಟೀಂ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಅವರಿಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು. ಈ ವೇಳೆ ಈ ಆಟಗಾರರು ನೀಡಿದ ಒಂದಿಷ್ಟು ಸಲಹೆ, ಸೌರಭ್ ಕ್ರಿಕೆಟ್ ಬದುಕಿಗೆ ಹೊಸ ಉತ್ಸಾಹ ನೀಡಿತು.
ಈ ಹಿಂದೆ 2017ರ ಐಪಿಎಲ್ ವೇಳೆ ಸೌರಭ್ ಕುಮಾರ್, 10 ಲಕ್ಷ ರೂ.ಗಳಿಗೆ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದ ಆಟಗಾರರ ಆಯ್ಕೆಗು ಮುನ್ನ ನಡೆದ ಐಪಿಎಲ್ ಹರಾಜಿನಲ್ಲಿ ಸೌರಭ್ ಕುಮಾರ್ ಯಾವುದೇ ತಂಡಕ್ಕೂ ಮಾರಾಟವಾಗಲಿಲ್ಲ.