ಐಪಿಎಲ್ 2022 ರ ಐದನೇ ಲೀಗ್ ಪಂದ್ಯದಲ್ಲಿ, ರಾಜಸ್ಥಾನದ ನಾಯಕ ಸಂಜು ಸ್ಯಾಮ್ಸನ್ ಹೈದರಾಬಾದ್ ವಿರುದ್ಧ ಆಕರ್ಷಕ ಬ್ಯಾಟಿಂಗ್ ನಡೆಸಿದರು. ಈ ಪಂದ್ಯದಲ್ಲಿ ರಾಜಸ್ಥಾನಕ್ಕೆ ಉತ್ತಮ ಆರಂಭ ಸಿಕ್ಕಿತು. ಇದರ ಲಾಭ ಪಡೆದ ಸಂಜು ಸ್ಯಾಮ್ಸನ್ ಮುಕ್ತ ಬ್ಯಾಟಿಂಗ್ ನಡೆಸಿದರು. ಸಂಜು 27 ಎಸೆತಗಳಲ್ಲಿ 55 ರನ್ ಬಾರಿಸಿದರು. ಅವರ ಅಮೋಘ ಇನ್ನಿಂಗ್ಸ್ ನಲ್ಲಿ 5 ಅದ್ಭುತ ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಮೂಲಕ ಸಂಜು ಸ್ಯಾಮ್ಸನ್ ಐಪಿಎಲ್ನಲ್ಲಿ ರಾಜಸ್ಥಾನ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 5 ಸಿಕ್ಸರ್ ಬಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದೀಗ ಸಂಜು ರಾಜಸ್ಥಾನ ಪರ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಸಂಜು, ಶೇನ್ ವ್ಯಾಟ್ಸನ್ ಅವರನ್ನು ಹಿಂದಿಕ್ಕಿ ಈ ದಾಖಲೆಗೆ ತಮ್ಮ ಹೆಸರು ನಮೂದಿಸಿದ್ದಾರೆ. ಐಪಿಎಲ್ನಲ್ಲಿ ಇದುವರೆಗೆ ರಾಜಸ್ಥಾನ ಪರ ಸಂಜು ಸ್ಯಾಮ್ಸನ್ ಒಟ್ಟು 110 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಶೇನ್ ವ್ಯಾಟ್ಸನ್ ಈ ತಂಡದ ಪರವಾಗಿ ಒಟ್ಟು 109 ಸಿಕ್ಸರ್ಗಳನ್ನು ಬಾರಿಸಿದ್ದರು. ಈ ಪಟ್ಟಿಯಲ್ಲಿ, ಜೋಸ್ ಬಟ್ಲರ್ 67 ಸಿಕ್ಸರ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ನಲ್ಲಿ ರಾಜಸ್ಥಾನ ಪರ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಸಂಜು ಸ್ಯಾಮ್ಸನ್ ಪಾತ್ರರಾದರು. ಆರ್ಸಿಬಿ ಪರ ಗರಿಷ್ಠ ಸಿಕ್ಸರ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಮತ್ತೊಂದೆಡೆ, ಪೊಲಾರ್ಡ್ ಮುಂಬೈ ಪರ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಧೋನಿ ಸಿಎಸ್ಕೆ ತಂಡದಿಂದ ಈ ಅದ್ಭುತ ಸಾಧನೆ ಮಾಡಿದ್ದಾರೆ. ಡೇವಿಡ್ ವಾರ್ನರ್ ಹೈದರಾಬಾದ್ ಪರ, ಆಂಡ್ರೆ ರಸೆಲ್ ಕೆಕೆಆರ್ ಪರ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ದೆಹಲಿ ಪರ ರಿಷಬ್ ಪಂತ್ ಮತ್ತು ಪಂಜಾಬ್ ಪರ ಕೆಎಲ್ ರಾಹುಲ್ ಇದುವರೆಗೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದಾರೆ.