ವರ್ಣ ರಂಜಿತ ಟೆನಿಸ್ ಬದುಕಿಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ…!
ಭಾರತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ತನ್ನ ವರ್ಣರಂಜಿತ ಟೆನಿಸ್ ಬದುಕಿಗೆ ವಿದಾಯ ಹೇಳಿದ್ದಾರೆ.
2022ರ ಡಬ್ಲ್ಯೂಟಿಎ ಟೂರ್ನಿಯ ಬಳಿಕ ಟೆನಿಸ್ ಬದುಕಿಗೆ ವಿದಾಯ ಹೇಳುವುದಾಗಿ ಸಾನಿಯಾ ಮಿರ್ಜಾ ಹೇಳಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಉಕ್ರೆನ್ ನ ನಡಿಯಾ ಕಿಚೆಂಕ್ ಅವರು 4-6, 6-7ರಿಂದ ಸ್ಲೋವೆನಿಯಾದ ತಾಮರ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ.
2022ರ ಡಬ್ಲ್ಯೂಟಿಎ ಆವೃತ್ತಿ ಯ ಬಳಿಕ ಟೆನಿಸ್ ಅಂಗಣದಿಂದ ದೂರ ಸರಿಯಲಿದ್ದೇನೆ. ಟೆನಿಸ್ ಬದುಕಿನಿಂದ ದೂರ ಸರಿಯಲು ಕೆಲವು ಕಾರಣಗಳಿವೆ. ನನಗೆ ಚೇತರಿಸಿಕೊಳ್ಳಲು ಸಮಯದ ಅಭಾವ ಇದೆ. ನನ್ನ ಮೂರು ವರ್ಷದ ಮಗುವಿನ ಜೊತೆ ಪ್ರಯಾಣ ಬೆಳೆಸುವುದು ಕೂಡ ಕಷ್ಟ. ಜೊತೆಗೆ ನನ್ನ ದೇಹ ಕೂಡ ಮೊದಲಿನಂತೆ ಆಡಲು ಸ್ಪಂದಿಸುತ್ತಿಲ್ಲ. ನನ್ನ ಮೊಣಕಾಲಿನ ನೋವು ತುಂಬಾನೇ ಕಾಡುತ್ತಿದೆ. ಹೀಗಾಗಿ ಚೇತರಿಸಿಕೊಳ್ಳಲು ಕೂಡ ಸಾಕಷ್ಟು ಸಮಯ ಬೇಕಾಗಿದೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.
ಮಹಿಳೆಯರ ಡಬಲ್ಸ್ ಪಂದ್ಯದ ಸೋಲಿನ ಬಳಿಕ ಸಾನಿಯಾ ಮಿರ್ಜಾ ಅವರು ಟೆನಿಸ್ ಬದುಕಿಗೆ ವಿದಾಯ ಹೇಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
35ರ ಹರೆಯದ ಸಾನಿಯಾ ಮಿರ್ಜಾ ಅವರು ಭಾರತೀಯ ಮಹಿಳಾ ಟೆನಿಸ್ ನ ಅದ್ಭುತ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಹಲವು ವಿವಾದಗಳ ನಡುವೆಯೂ ತನ್ನ ಅದ್ಭುತ ಆಟದ ಮೂಲಕ ವಿಶ್ವ ಟೆನಿಸ್ ನಲ್ಲಿ ಗಮನ ಸೆಳೆದಿರುವ ಸಾನಿಯಾ ಮಿರ್ಜಾ ಅವರು ಮೂಗುತಿ ಸುಂದ್ರಿ ಅಂತನೇ ಫೇಮಸ್ ಆಗಿದ್ದಾರೆ.
ಮಹಿಳೆಯರ ಡಬಲ್ಸ್ ನಲ್ಲಿ ನಂಬರ್ ವನ್ ಸ್ಥಾನಕ್ಕೇರಿದ್ದ ಹೆಗ್ಗಳಿಕೆಯೂ ಸಾನಿಯಾ ಮಿರ್ಜಾ ಅವರಿಗಿದೆ. ಸದ್ಯ ಸಾನಿಯಾ ಮಿರ್ಜಾ ಅವರು ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 68ನೇ ಶ್ರೇಯಾಂಕದಲ್ಲಿದ್ದಾರೆ. ಹಾಗೇ ಸಿಂಗಲ್ಸ್ ನಲ್ಲಿ 27ನೇ ಶ್ರೇಯಾಂಕವನ್ನು ಗಿಟ್ಟಿಸಿಕೊಂಡಿದ್ದರು.
2016ರಲ್ಲಿ ಸಾನಿಯಾ ಮಿರ್ಜಾ ಅವರು ಮಾರ್ಟಿನಾ ಹಿಂಗೀಸ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಆ ನಂತರ 2021ರಲ್ಲಿ ಒಸ್ಟ್ರಾವಾ ಓಪನ್ ಟ್ರೋಫಿ ಗೆದ್ದುಕೊಂಡಿದ್ದರು. ಒಟ್ಟಾರೆಯಾಗಿ ಸಾನಿಯಾ ಮಿರ್ಜಾ ಅವರು 43 ಡಬಲ್ಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಹಾಗೇ ಮೂರು ಬಾರಿ ಮಹಿಳಾ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಂ ಮತ್ತು ಮಿಕ್ಸೆಡ್ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿಕೊಂಡಿದ್ದಾರೆ.