Sanath Jayasuriya – ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವ ಮತ್ತೆ ಸ್ಥಾಪನೆಯಾಗುತ್ತದೆ

ಶ್ರೀಲಂಕಾದಲ್ಲಿ ನಡೆಯುತ್ತಿರುವ ನಾಗರೀಕ ಅಶಾಂತಿ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪರಿಸ್ಥಿತಿಯ ಬಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಸನತ್ ಜಯಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾದ ನಾಗರೀಕರು ಅನುಭವಿಸುತ್ತಿರುವ ನೋವು ಯಾತನೆಯನ್ನು ನೋಡಿದಾಗ ದುಃಖವಾಗುತ್ತದೆ. ಅಗತ್ಯ ಆಹಾರ ಪದಾರ್ಥಗಳನ್ನು ಪಡೆಯಲು ಕ್ಯೂನಲ್ಲಿ ನಿಂತಿರುವುದನ್ನು ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದಾರೆ.
ಔಷದಿಗಳು ಸಿಗುತ್ತಿಲ್ಲ. ವಿದ್ಯುತ್ ಇಲ್ಲ, ಇಂಧನ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮೂಲಭೂತ ಅವಶ್ಯಕತೆಗಳೇ ಇಲ್ಲ. ಜನ ಸಾಮಾನ್ಯರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ಗೋಟಾಬಯ ರಾಜಪಕ್ಷೆ ಅವರ ಕೆಟ್ಟ ಆರ್ಥಿಕ ನೀತಿಗಳಿಂದ ದ್ವೀಪ ರಾಷ್ಟ್ರ ಪಾತಾಳಕ್ಕೆ ಕುಸಿದಿದೆ. ಗೋಟಾಬಯ ಅವರು ಮಾಲ್ಡೀವ್ಸ್ ಗೆ ಪಲಾಯನ ಮಾಡಿದ್ದಾರೆ. ಅಧ್ಯಕ್ಷರ ನಿವಾಸವನ್ನು ನಾಗರೀಕರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ನಮ್ಮ ದೇಶದ ರಾಜಕಾರಣಿಗಳು ದೇಶವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಇದನ್ನು ವಿವರಿಸಲು ಪದಗಳಿಲ್ಲ. ಶ್ರೀಲಂಕಾದ ಪರಿಸ್ಥಿತಿ ಹದಗೆಟ್ಟಿರುವುದು ದುರಾದೃಷ್ಟಕರ ಎಂದು ಜಯಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ರಾಷ್ಟ್ರಪತಿ ಭವನವನ್ನು ನಾಗರೀಕರು ಸ್ವಾಧೀನಪಡಿಸಿಕೊಂಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಅವರು ಮಾಡಿರುವುದು ಪ್ರಮಾದ ಎಂದು ನನಗೆ ಅನ್ನಿಸುತ್ತಿಲ್ಲ. ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಬೇಡಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಜುಲೈ 9ರಂದು ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯೊಂದಿಗೆ ಶ್ರೀಲಂಕಾದ ಬೇರೆ ಬೇರೆ ಭಾಗಗಳಿಂದ ಜನರು ಬಂದಿದ್ದಾರೆ ಎಂದು ಹೇಳಿದ್ರು.
ಶ್ರೀಲಂಕಾದಲ್ಲಿ ಮತ್ತೆ ಪ್ರಜಾಪ್ರಭುತ್ವ ಸ್ಥಾಪನೆಯಾಗುತ್ತದೆ. ಹಂಗಾಮಿ ಅಧ್ಯಕ್ಷರಾಗಿ ಪ್ರಧಾನ ಮಂತ್ರಿ ರನಿಲ್ ವಿಕ್ರಮ ಸಿಂಘೆ ಅವರು ಆಯ್ಕೆಯಾಗಿದ್ದಾರೆ. ಅವರು ಸ್ಪೀಕರ್ ಆದೇಶಕ್ಕೆ ಬದ್ಧರಾಗಿರಬೇಕು. ಹಾಗೇ ಪ್ರಜಾಪ್ರಭುತ್ವವನ್ನು ಮತ್ತೆ ಸ್ಥಾಪಿಸಲು ರನೀಲ್ ಅವರು ಎಲ್ಲಾ ರಾಜಕೀಯ ಮುಖಂಡರೊಂದಿಗೆ ಚರ್ಚೆ ಮಾಡಬೇಕು ಎಂದು ಹೇಳಿದ್ರು.
ಇನ್ನು ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಶಾಂತಿಯ ನಡುವೆಯೂ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ಟೂರ್ನಿಯನ್ನು ಆಡಿತ್ತು. ಇದಕ್ಕೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ ಮುಂದಿನ ಏಷ್ಯಾಕಪ್ ಟೂರ್ನಿಗೂ ತೊಂದರೆಯಾಗುವುದಿಲ್ಲ. ಯಾಕಂದ್ರೆ ಶ್ರೀಲಂಕಾದ ಜನ ಕ್ರಿಕೆಟ್ ಆಟದ ಮೇಲೆ ಅಪಾರವಾದ ಪ್ರೀತಿಯನ್ನಿಟ್ಟುಕೊಂಡಿದ್ದಾರೆ ಎಂದು ಜಯ ಸೂರ್ಯ ಹೇಳಿದ್ರು.
90ರ ದಶಕದಲ್ಲಿ ಸನತ್ ಜಯಸೂರ್ಯ ಅವರು ಕ್ರಿಕೆಟ್ ನ ಸಂಪ್ರದಾಯವನ್ನು ಮುರಿದು ವೇಗದ ಆಟಕ್ಕೆ ನಾಂದಿ ಹಾಡಿದ ಕ್ರಿಕೆಟಿಗ. ಹೊಡಿಬಡಿ ಆಟದ ಮೂಲಕ ಪವರ್ ಪ್ಲೇ ಲಾಭವನ್ನು ಪಡೆದುಕೊಳ್ಳುವಂತೆ ಮಾಡಿದ್ದ ಜಯಸೂರ್ಯ, 1996ರ ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.