ಕ್ರಿಕೆಟ್ನಲ್ಲಿ ಶತಕ ಸಿಡಿಸುವುದೇ ದೊಡ್ಡ ಗೌರವ. ದ್ವಿಶತಕ ಸಿಡಿಸಿದರೆ ಅದರ ಸಂಭ್ರಮವೇ ಬೇರೆ. ತ್ರಿಶತಕ ಸಿಡಿಸಿದರೆಸ ಅದ್ಭುತ ಇನ್ನಿಂಗ್ಸ್. ಆದರೆ 400 ರನ್ಗಳ ಗಡಿ ದಾಟಿದರೆ ಅದು ವಿಶ್ವದಾಖಲೆಯ ಸಂಭ್ರಮ. ಹೌದು ಇಂಗ್ಲೀಷ್ ಕೌಂಟಿ ಕ್ರಿಕೆಟ್ನಲ್ಲಿ (English County) ಇಂತಹದ್ದೊಂದು ಅಪರೂಪದ ದಾಖಲೆ ನಿರ್ಮಾಣವಾಗಿದೆ. ಗ್ಲಾಮರ್ಗನ್ ತಂಡದ ಸ್ಯಾಮ್ ನಾರ್ತ್ ಈಸ್ಟ್ ಹೊಸ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ಬ್ಯಾಟ್ಸ್ಮನ್ ಸ್ಯಾಮ್ ನಾರ್ತ್ಈಸ್ಟ್ (Sam NorthEast) ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಬಿರುಗಾಳಿ ಸೃಷ್ಟಿಸಿದ್ದಾರೆ. ಲಿಸೆಸ್ಟರ್ ಶೈರ್ ವಿರುದ್ಧದ ಪಂದ್ಯದಲ್ಲಿ ಗ್ಲಮರ್ಗನ್ ತಂಡದ ಸ್ಯಾಮ್ ಒಂದೇ ಇನ್ನಿಂಗ್ಸ್ನಲ್ಲಿ 410 ರನ್ ಸಿಡಿಸಿದ್ದಾರೆ. 450 ಎಸೆತಗಳನ್ನು ಎದುರಿಸಿದ ಸ್ಯಾಮ್ 45 ಬೌಂಡರಿ, 3 ಸಿಕ್ಸರ್ ಸಿಡಿಸಿದ್ದರು. ಇದು ಈ ಶತಮಾನದ ಮೊದಲ 400 ರನ್ಗಳ ಸಾಧನೆಯಾಗಿದೆ.
18 ವರ್ಷಗಳ ನಂತರ ಬ್ಯಾಟ್ಸ್ಮನ್ ಒಬ್ಬ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 400+ ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ (Brian Lara) 2004ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 400 ರನ್ ಸಿಡಿಸಿದ್ದರು. ಅಲ್ಲಿಂದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇಂತಹ ದಾಖಲೆ ಮಾಡಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಈಗ ಸ್ಯಾಮ್ ಈ ದಾಖಲೆ ಬರೆದಿದ್ದಾರೆ.
1994ರಲ್ಲಿ ಲಾರಾ ಪ್ರಥಮ ದರ್ಜೆ ಪಂದ್ಯದಲ್ಲಿ 501 ರನ್ ಗಳಿಸಿದ್ದು ಇಂದಿಗೂ ವಿಶ್ವದಾಖಲೆಯಾಗಿದೆ. ಪಾಕಿಸ್ತಾನದ ಹನೀಫ್ ಮೊಹಮ್ಮದ್ 1950ರಲ್ಲಿ 499 ರನ್ಗಳಿಸಿದ್ದರೆ, ಡಾನ್ ಬ್ರಾಡ್ಮನ್ 1930ರಲ್ಲಿ 452 ರನ್ಗಳಿಸಿ ಅಜೇಯರಾಗುಳಿದಿದ್ದರು. 1948ರಲ್ಲಿ ಬಾವುಸಾಹೇಬ್ ನಿಂಬಳ್ಕರ್ ಅಜೇಯ 443 ರನ್ಗಳಿಸಿದ್ದರು. ಬಿಲ್ ಪೊನ್ಸ್ಪೊರ್ಡ್ 1928ರಲ್ಲಿ 437 ಹಾಗೂ 1923ರಲ್ಲಿ 429 ರನ್ಗಳಿಸಿದ್ದರು. 1974ರಲ್ಲಿ ಅಫ್ತಾಬ್ ಬಲೋಚ್ 428 ರನ್ಗಳಿಸಿದ್ದರೆ, 1859ರಲ್ಲಿ ಆರ್ಚಿ ಮೆಕ್ ಲಾರೆನ್ 424 ರನ್ಗಳಿಸಿದ್ದರು. ಈಗ ಸ್ಯಾಮ್ ನಾರ್ತ್ಈಸ್ಟ್ ಅಜೇಯ 410 ರನ್ಗಳಿಸಿದ್ದಾರೆ. 1988ರಲ್ಲಿ ಗ್ರೇಮ್ ಹಿಕ್ ಅಜೇಯ 405 ಹಾಗೂ 2004ರಲ್ಲಿ ಬ್ರ್ಯಾನ್ ಲಾರಾ ಅಜೇಯ 400 ರನ್ ಸಿಡಿಸಿದ್ದರು.