ದಾದಾ ಬಿಸಿಸಿಐ ಬಾಸ್… ದ್ರಾವಿಡ್ ಹೆಡ್ ಕೋಚ್… ಲಕ್ಷ್ಮಣ್ ಎನ್ ಸಿಎ ಹೆಡ್… ಹಾಗಿದ್ರೆ ಸಚಿನ್ ಹುದ್ದೆ ಯಾವುದು ?
ಸೌರವ್ ಗಂಗೂಲಿ – ಬಿಸಿಸಿಐ ಅಧ್ಯಕ್ಷ… ರಾಹುಲ್ ದ್ರಾವಿಡ್ – ಟೀಮ್ ಇಂಡಿಯಾದ ಹೆಡ್ ಕೋಚ್.. ವಿವಿಎಸ್ ಲಕ್ಷ್ಮಣ್ – ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ.
ಈ ತ್ರಿಮೂರ್ತಿಗಳು ಭಾರತೀಯ ಕ್ರಿಕೆಟ್ ನ ಆಧಾರ ಸ್ತಂಭಗಳು. ಈ ಹಿಂದೆ ಆಟಗಾರರಾಗಿ ಟೀಮ್ ಇಂಡಿಯಾದ ಆಧಾರ ಸ್ತಂಭಗಳಾಗಿದ್ದರು. ಈಗ ಭಾರತದಲ್ಲಿ ಕ್ರಿಕೆಟ್ ಆಟವನ್ನು ಉನ್ನತ ಮಟ್ಟಕ್ಕೇರಿಸಲು ಶ್ರಮಪಡುತ್ತಿದ್ದಾರೆ.
ಹಾಗಿದ್ರೆ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಯಾಕೆ ಇಲ್ಲ ? ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತರ ಸಚಿನ್ ತೆಂಡುಲ್ಕರ್ ಸೈಲೆಂಟ್ ಆಗಿರುವುದು ಯಾಕೆ ? ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ
ತನ್ನ ಕ್ರಿಕೆಟ್ ಅಕಾಡೆಮಿಯ ಜೊತೆ ಐಪಿಎಲ್ ನಲ್ಲಿ ಮುಂಬೈ ತಂಡದ ಮೆಂಟರ್ ಕೂಡ ಆಗಿರುವ ಸಚಿನ್ ತೆಂಡುಲ್ಕರ್ ಕ್ರಿಕೆಟ್ ವಿಕ್ಷಣೆ ವಿವರಣೆ ಕೂಡ ಮಾಡುತ್ತಿರುತ್ತಾರೆ.
ಆದ್ರೆ ಸಚಿನ್ ತೆಂಡುಲ್ಕರ್ ಬಿಸಿಸಿಐನ ಮೆಟ್ಟಿಲು ಮಾತ್ರ ಹತ್ತಿಲ್ಲ. ಕ್ರಿಕೆಟ್ ಆಡಳಿತದ ಬಗ್ಗೆ ಸಚಿನ್ ಗೂ ಮನಸಿಲ್ಲ. ಹಾಗೇ ಕೋಚಿಂಗ್ ಕಡೆಗೂ ಅಷ್ಟೊಂದು ಗಮನ ಹರಿಸುತಿಲ್ಲ.
ಆದ್ರೆ ಮುಂದಿನ ದಿನಗಳಲ್ಲಿ ಸಚಿನ್ ತೆಂಡುಲ್ಕರ್ ಕೂಡ ಭಾರತೀಯ ಕ್ರಿಕೆಟ್ ನಲ್ಲಿ ಉನ್ನತ ಸ್ಥಾನಮಾನ ಪಡೆಯುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುಳಿವು ನೀಡಿದ್ದಾರೆ.
ಸಚಿನ್ ತೆಂಡುಲ್ಕರ್ ಒಬ್ಬ ವಿಭಿನ್ನ ವ್ಯಕ್ತಿ. ಅವರು ಇದರಲ್ಲಿ ಭಾಗಿಯಾಗೋದು ಅವರಿಗೆ ಇಷ್ಟವಿಲ್ಲ. ಆದ್ರೂ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ನಲ್ಲಿ ಸಕ್ರಿಯರಾಗಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.
ಈ ಹಿಂದೆ ಸೌರವ್ ಗಂಗೂಲಿ ಅವರು, ರಾಹುಲ್ ದ್ರಾವಿಡ್ ಅವರಿಗೆ ಹೆಡ್ ಕೋಚ್ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಎನ್ ಸಿಎ ಮುಖ್ಯಸ್ಥರನ್ನಾಗಿಸಲು ದಾದಾನ ಪ್ರಭಾವ ಇದೆ ಎಂಬುದು ಗೊತ್ತಿಲ್ಲದ ವಿಚಾರವಲ್ಲ. ಅಲ್ಲದೆ ಭಾರತೀಯ ಕ್ರಿಕೆಟ್ ಸುರಕ್ಷಿತರ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ಕೂಡ ಹೇಳಿದ್ದರು.
ಒಟ್ಟಿನಲ್ಲಿ 20 ವರ್ಷಗಳ ಹಿಂದೆ ಟೀಮ್ ಇಂಡಿಯಾವನ್ನು ಕಟ್ಟಿದ್ದ ಹಾಗೇ ಸೌರವ್ ಗಂಗೂಲಿ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ಸುರಕ್ಷಿತರ ಕೈಯಲ್ಲಿ ಸುರಕ್ಷಿತವಾಗಿರಿಸಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.