ಸ್ಪಿನ್ ಮ್ಯಾಜಿಷಿಯನ್ ಶೇನ್ ವಾರ್ನ್ ನಿಧನದ ಸುದ್ದಿ ಕ್ರಿಕೆಟ್ ಜಗತ್ತಿಗೆ ಆಘಾತವನ್ನುಂಟು ಮಾಡಿದೆ. ವಿಶ್ವ ಕ್ರಿಕೆಟ್ ನಲ್ಲಿ ಶೇನ್ ವಾರ್ನ್ ಎಷ್ಟು ಎತ್ತರಕ್ಕೆ ಬೆಳೆದ್ರೊ ಅಷ್ಟೇ ವಿವಾದಗಳು ಬಳ್ಳಿಯಂತೆ ಅವರನ್ನು ಸುತ್ತುಕೊಂಡಿದ್ದವು. ಆದ್ರೂ ಶೇನ್ ವಾರ್ನ್ ಅಂದ್ರೆ ತುಂಬಾನೇ ಅಚ್ಚು ಮೆಚ್ಚಿನ ಕ್ರಿಕೆಟಿಗ.
ನಿಜ, ಶೇನ್ ವಾರ್ನ್ ಹುಂಬ. ತುಸು ಅಹಂಕಾರಿ. ತನ್ನ ಪ್ರತಿಭೆ ಮತ್ತು ಸಾಮಥ್ರ್ಯದ ಬಗ್ಗೆ ಅತೀಯಾದ ಆತ್ಮವಿಶ್ವಾಸವನ್ನು ಹೊಂದಿದ್ದರು. ಹೀಗಾಗಿಯೇ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಗಳನ್ನು ಲಘುವಾಗಿಯೇ ಪರಿಗಣಿಸುತ್ತಿದ್ದರು. ಆದ್ರೆ ತನ್ನ ವಿರುದ್ಧ ಬ್ಯಾಟ್ಸ್ ಮೆನ್ ಗಳು ಮೇಲುಗೈ ಸಾಧಿಸಿದಾಗ ಅವರ ಬ್ಯಾಟಿಂಗ್ ವೈಖರಿಯನ್ನು ಮೆಚ್ಚಿಕೊಳ್ಳುವ ಗುಣವೂ ಶೇನ್ ವಾರ್ನ್ ಅವರಲಿತ್ತು.
ಮುಖ್ಯವಾಗಿ ವಿಶ್ವ ಕ್ರಿಕೆಟ್ ನಲ್ಲಿ ಶೇನ್ ವಾರ್ನ್ ಅವರನ್ನು ಅತೀಯಾಗಿ ಕಾಡಿದ್ದು ಅಂದ್ರೆ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್. 1992ರ ಚೊಚ್ಚಲ ಪಂದ್ಯದಲ್ಲೇ ಶೇನ್ ವಾರ್ನ್ ಅವರು ಸಚಿನ್ ತೆಂಡುಲ್ಕರ್ ಅವರನ್ನು ಹತ್ತು ವರ್ಷದ ಬಾಲಕ ಅಂತ ಬಾಲಿಶವಾದ ಹೇಳಿಕೆಯನ್ನು ನೀಡಿದ್ದರು. ಆದ್ರೆ ಸಚಿನ್ ಶೇನ್ ವಾರ್ನ್ ಗೆ ಬಹಿರಂಗವಾಗಿ ಏನು ಹೇಳಲಿಲ್ಲ. ಸೈಲೆಂಟಾಗಿಯೇ ಸಿಡ್ನಿ ಮೈದಾನದಲ್ಲಿ ಶೇನ್ ವಾರ್ನ್ಗೆ ಉತ್ತರ ನೀಡಿದ್ದರು. ಹತ್ತು ವರ್ಷದ ಬಾಲಕನ ಬ್ಯಾಟಿಂಗ್ ವೈಖರಿ ಹೇಗಿರುತ್ತೆ ಅನ್ನೋದರ ಸ್ಯಾಂಪಲ್ ಅನ್ನು ಸಚಿನ್ ವಾರ್ನ್ ಗೆ ತೋರಿಸಿಕೊಟ್ಟಿದ್ದರು.
ಆನಂತರ ಸಚಿನ್ ಮತ್ತು ಶೇನ್ ವಾರ್ನ್ ನಡುವೆ ಅನೇಕ ರೋಚಕ ಹೋರಾಟಗಳು ನಡೆದಿದ್ದವು. ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯ ಅಂದ್ರೆ ಅದು ಸಚಿನ್ ಮತ್ತು ಶೇನ್ ವಾರ್ನ್ ಕದನ ಅಂತನೇ ಬಿಂಬಿಸಲಾಗುತ್ತಿತ್ತು.
ಮುಖ್ಯವಾಗಿ ಸಚಿನ್ ಕೂಡ ಶೇನ್ ವಾರ್ನ್ ಅವರ ಬೌಲಿಂಗ್ ಚಮತ್ಕಾರಕ್ಕೆ ಗೌರವ ನೀಡುತ್ತಿದ್ದರು. ಪ್ರತಿ ಸರಣಿಗೂ ಮುನ್ನ ಸಚಿನ್ ಶೇನ್ ವಾರ್ನ್ ಬೌಲಿಂಗ್ ಬಗ್ಗೆ ಹೋಮ್ ವರ್ಕ್ ಮಾಡಿಕೊಳ್ಳುತ್ತಿದ್ದರು. ಹೀಗಾಗಿಯೇ 1998ರಲ್ಲಿ ಶಾರ್ಜಾದಲ್ಲಿ ಶೇನ್ ವಾರ್ನ್ ಅವರ ಅಹಂಗೆ ಪೆಟ್ಟುಕೊಡಲು ಸಚಿನ್ ಗೆ ಸಾಧ್ಯವಾಯ್ತು. ಶಾರ್ಜಾದಲ್ಲಿ ಶೇನ್ ವಾರ್ನ್ ಅವರ ಚಳಿ ಬಿಡಿಸಿದ್ದ ಸಚಿನ್ ಬಗ್ಗೆ ಶೇನ್ ವಾರ್ನ್ ಹೇಳಿದ್ದು ಹೀಗೆ.. ನನ್ನ ಕನಸಿನಲ್ಲೂ ಸಚಿನ್ ನನಗೆ ಕಾಡುತ್ತಿರುತ್ತಾರೆ ಅಂತ.
ಅಂದ್ರೆ ಒಬ್ಬ ಶ್ರೇಷ್ಠ ಆಟಗಾರನನ್ನು ಮೆಚ್ಚಿಕೊಳ್ಳುವ ಗುಣ ಶೇನ್ ವಾರ್ನ್ ಅವರಲ್ಲಿತ್ತು. ಅಲ್ಲದೆ ಸಚಿನ್ ಜೊತೆಗೆ ಮೈದಾನದಲ್ಲಿ ಎಷ್ಟೇ ಹೋರಾಟ ನಡೆಸಲಿ, ಮೈದಾನದ ಹೊರಗಡೆ ಆತ್ಮೀಯವಾದ ಬಾಂಧವ್ಯವಿತ್ತು.
ಒಟ್ಟಿನಲ್ಲಿ ಶೇನ್ ವಾರ್ನ್ ಒಬ್ಬ ಚಾಂಪಿಯನ್ ಆಟಗಾರ. ಸವಾಲುಗಳನ್ನು ಮೆಟ್ಟಿಲು ಅಂತ ತಿಳಿದುಕೊಂಡು ವಿಶ್ವ ಕ್ರಿಕೆಟ್ ನಲ್ಲಿ ರಾರಾಜಿಸಿದ್ದ ಶೇನ್ ವಾರ್ನ್ ಕ್ರಿಕೆಟ್ ಜಗತ್ತಿನ ಎವರ್ ಗ್ರೀನ್ ಹೀರೋ.. ಮಿಸ್ ಯೂ ಸ್ಪಿನ್ ಡಾಕ್ಟ್ರೇ..!