ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಸೌತ್ ಆಫ್ರಿಕಾ, ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ 33 ರನ್ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.
ಡ್ಯುನೆಡಿನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಸೌತ್ ಆಫ್ರಿಕಾ, 49.5 ಓವರ್ನಲ್ಲಿ 207 ರನ್ಗಳಿಸಿತು. ಈ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾದೇಶ ಬ್ಯಾಟಿಂಗ್ ವೈಫಲ್ಯದಿಂದ 175 ರನ್ಗಳಿಗೆ ಆಲೌಟ್ ಆಗುವ ಮೂಲಕ 32 ರನ್ಗಳ ಸೋಲನುಭವಿಸಿತು.
ಸೌತ್ ಆಫ್ರಿಕಾ ನೀಡಿದ ಪೈಪೋಟಿಯ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆಯಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಶಮೀಮಾ ಸುಲ್ತಾನ(27) ಹಾಗೂ ಶರ್ಮಿನ್ ಅಖ್ತರ್(34) ಮೊದಲ ವಿಕೆಟ್ಗೆ 69 ರನ್ಗಳ ಉತ್ತಮ ಆರಂಭ ಒದಗಿಸಿದರು. ಆದರೆ ನಂತರ ಬಂದ ಫರ್ಗಾನಾ ಹೋಕ್(8) ಹಾಗೂ ಮುರ್ಷಿದಾ ಖಾತುನ್(0) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ಹಂತದಲ್ಲಿ ಜೊತೆಯಾದ ರುಮಾನ ಅಹ್ಮೆದ್(21) ಹಾಗೂ ನಾಯಕಿ ನಿಗಾರ್ ಸುಲ್ತಾನ(29), ರಿತು ಮೋನಿ(27) ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು.
ಆದರೆ ನಂತರ ಬಂದ ಬಾಂಗ್ಲಾ ತಂಡದ ಯಾವುದೇ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಪರಿಣಾಮ ಬಾಂಗ್ಲಾ ಪಡೆ 175 ರನ್ಗಳಿಗೆ ಸರ್ವಪತನ ಕಂಡಿತು. ಸೌತ್ ಆಫ್ರಿಕಾ ಪರ ಅಯಬೊಂಗ ಖಾಕಾ 4 ವಿಕೆಟ್ ಪಡೆದು ಬಾಂಗ್ಲಾದೇಶದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕ್ಲಾಸ್ 2, ಶಬ್ಮಿನ್ ಇಸ್ಮಾಯಿಲ್ ಹಾಗೂ ಮರಿಸ್ಸನ್ನೆ ಕಾಪ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ಆರಂಭಿಕ ಬ್ಯಾಟರ್ ಲೌರಾ ವೊಲ್ವಾರ್ಡ್ಟ್(41), ಮರಿಸ್ಸನ್ನೆ ಕಾಪ್(42) ಹಾಗೂ ಕ್ಲೋಯ್ ಟ್ರೈಯಾನ್(39) ರನ್ಗಳ ಜವಾಬ್ದಾರಿಯ ಆಟದಿಂದ ತಂಡಕ್ಕೆ ಆಸರೆಯಾದರು. ಆದರೆ ಉಳಿದ ಬ್ಯಾಟರ್ಗಳು ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ಬಾಂಗ್ಲಾದೇಶ ಪರ ಫರಿಯಾ ತ್ರಿಸ್ನಾ 3, ಅಲಮ್ ಹಾಗೂ ಮೋನಿ ತಲಾ 2 ವಿಕೆಟ್ ಪಡೆದರು.