Sachin Tendulkar – ಟೀಮ್ ಇಂಡಿಯಾದ ಸಾವಿರ ಏಕದಿನ ಪಂದ್ಯ.. ಅದರಲ್ಲಿದೆ ಕ್ರಿಕೆಟ್ ಬ್ರಹ್ಮನ ಹೆಜ್ಜೆ- ಗೆಜ್ಜೆಯ 463 ಪಂದ್ಯ..!
ಟೀಮ್ ಇಂಡಿಯಾ, ಏಕದಿನ ಕ್ರಿಕೆಟ್ ನಲ್ಲಿ ಒಂದು ಸಾವಿರ ಪಂದ್ಯವನ್ನಾಡಿದ್ದ ಗೌರವಕ್ಕೆ ಪಾತ್ರವಾಗಲಿದೆ. ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯ ಭಾರತೀಯ ಕ್ರಿಕೆಟ್ ಗೆ ಅವಿಸ್ಮರಣೀಯ ಪಂದ್ಯವಾಗಲಿದೆ. ಆದ್ರೆ ಈ ಪಂದ್ಯವನ್ನು ಮೈದಾನದಲ್ಲಿ ನೋಡಲು ಪ್ರೇಕ್ಷಕರಿಗೆ ಅವಕಾಶವಿಲ್ಲ.
ಅದೇನೇ ಇರಲಿ, ಟೀಮ್ ಇಂಡಿಯಾ ಒಂದು ಸಾವಿರ ಪಂದ್ಯವನ್ನಾಡುತ್ತಿರುವ ಸಂದರ್ಭದಲ್ಲಿ ಟೀಮ್ ಇಂಡಿಯಾದ ಎವರ್ ಗ್ರೀನ್ ಹೀರೋ ಸಚಿನ್ ತೆಂಡುಲ್ಕರ್ ಮನಬಿಚ್ಚಿ ಮಾತನಾಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಭಾರತದ ಸಾಧನೆ, ಅವಿಸ್ಮರಣೀಯ ಗೆಲುವು, ಏಕದಿನ ಕ್ರಿಕೆಟ್ ನಲ್ಲಿ ಯಾವ ರೀತಿ ಕ್ರಾಂತಿಯಾಗಿತ್ತು ಎಂಬುದನ್ನೆಲ್ಲಾ ಸಚಿನ್ ತೆಂಡುಲ್ಕರ್ ನೆನಪು ಮಾಡಿಕೊಂಡಿದ್ದಾರೆ.
ಕಳೆದ 48 ವರ್ಷಗಳಲ್ಲಿ ಟೀಮ್ ಇಂಡಿಯಾ ಸದ್ಯ 999 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ ಸಚಿನ್ ತೆಂಡುಲ್ಕರ್ 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 18, 426 ರನ್ ಹಾಗೂ 49 ಶತಕ ಮತ್ತು 96 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅದು ಕೂಡ 23 ವರ್ಷಗಳಲ್ಲಿ. ಅಂದ್ರೆ ಶೇ.46ರಷ್ಟು ಏಕದಿನ ಪಂದ್ಯಗಳನ್ನು ಸಚಿನ್ ತೆಂಡುಲ್ಕರ್ ಆಡಿದ್ದಾರೆ.
ಅಂದ ಹಾಗೇ ಸಚಿನ್ ತೆಂಡುಲ್ಕರ್ ಟೀಮ್ ಇಂಡಿಯಾದ ಮಹತ್ವದ ಸಾಧನೆಯಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಟೀಮ್ ಇಂಡಿಯಾದ 200ನೇ ಏಕದಿನ, 300ನೇ ಏಕದಿನ, 400ನೇ ಏಕದಿನ, 500ನೇ ಏಕದಿನ, 600ನೇ ಏಕದಿನ, 700ನೇ ಏಕದಿನ ಮತ್ತು 800ನೇ ಏಕದಿನ ಪಂದ್ಯದಲ್ಲಿ ಭಾಗಿಯಾಗಿದ್ದರು ಎಂಬುದು ವಿಶೇಷ. ಅಷ್ಟೇ ಅಲ್ಲ, ಈ ರೀತಿಯ ಸಾಧನೆ ಮತ್ತು ಅವಿಸ್ಮರಣೀಯ ಪಂದ್ಯಗಳಲ್ಲಿ ವಿಶ್ವದ ಯಾವೊಬ್ಬ ಆಟಗಾರನು ಇರೋಕೆ ಸಾಧ್ಯವಿಲ್ಲ.
ಯಾಕಂದ್ರೆ ವಿಶ್ವ ಕ್ರಿಕೆಟ್ ನಲ್ಲಿ ಸಚಿನ್ ತೆಂಡುಲ್ಕರ್ ನಡೆದು ಬಂದ ಹಾದಿಯೇ ಅಂತಹುದ್ದು.1989ರಿಂದ 2012ರವರೆಗೆ ಭಾರತೀಯ ಕ್ರಿಕೆಟ್ ನ ಬ್ರಾಂಡ್ ಆಗಿದ್ದ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ಮಾಡಿದ್ದ ಕಲರವ ಅಷ್ಟಿಷ್ಟಲ್ಲ.
ಒಟ್ಟು ಆರು ವಿಶ್ವಕಪ್ ಗಳಲ್ಲಿ ಆಡಿರುವ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಮಾಡಿರುವಂತಹ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. 49 ಶತಕ, 96 ಅರ್ಧಶತಕ, ಗರಿಷ್ಠ ರನ್, ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ದಾಖಲಿಸಿದ್ದ ಮೊದಲ ಆಟಗಾರ ಹೀಗೆ ಹಲವು ದಾಖಲೆಗಳ ಒಡೆಯನಾಗಿರುವ ಸಚಿನ್ ತೆಂಡುಲ್ಕರ್ ಚಾಂಪಿಯನ್ ಆಟಗಾರ ಎಂಬುದನ್ನು ಪದೇ ಪದೇ ಹೇಳಲೇಬೇಕಾಗುತ್ತದೆ.
ಅದಕ್ಕೆ ಕಾರಣ. ವಿಶ್ವ ಕ್ರಿಕೆಟ್ ನಲ್ಲಿ ಸಚಿನ್ ಮೂಡಿಸಿರುವ ಹೆಜ್ಜೆ ಗುರುತುಗಳು. ಕ್ರಿಕೆಟ್ ಬ್ರಹ್ಮನ ಹೆಜ್ಜೆ ಗೆಜ್ಜೆಯ ನೀನಾದಕ್ಕೆ ಅಭಿಮಾನಿಗಳು ಪ್ರೀತಿಯಿಂದ ಕ್ರಿಕೆಟ್ ದೇವ್ರು ಅಂತ ಕರೆದ್ರು. ಅಭಿಮಾನಿಗಳ ನಿರೀಕ್ಷೆಗಳಿಗೆ ತಕ್ಕಂತೆ ಆಡುತ್ತಿದ್ದ ಸಚಿನ್ ತೆಂಡುಲ್ಕರ್ ಹಲವು ಬಾರಿ ಏರಿಳಿತಗಳನ್ನು ಕಂಡಿದ್ದಾರೆ. ಮುಖದಲ್ಲಿ ಒಂಚೂರು ಆಕ್ರಮಣಕಾರಿ ಪ್ರವೃತ್ತಿ ಇಲ್ಲದಿದ್ರೂ ನಗುಮುಖದಿಂದಲೇ ಎದುರಾಳಿ ಬೌಲರ್ ಗಳನ್ನು ದಂಗುಬಡಿಸುವ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರುಯ. ಆಕರ್ಷಕ ಶೈಲಿಯ ಬ್ಯಾಟಿಂಗ್ ನಿಂದ ಚೆಂಡು ನಲಿದಾಡುತ್ತಾ ಬೌಂಡರಿ ಗೆರೆ ದಾಟುತ್ತಿದ್ದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. ಮೈದಾನದಲ್ಲಿ ಮಂತ್ರ ಘೋಷದಂತೆ ಸಚಿನ್… ಸಚಿನ್.. ಸಚಿನ್.. ಮೂರಕ್ಷರ ಮೊಳಗುತ್ತಿದ್ದ ಕಾಲವೊಂದಿತ್ತು. ಆದ್ರೆ ಅದು ಈಗ ಸಚಿನ್ ಅವರನ್ನು ನೆನಪು ಮಾಡಿಕೊಂಡಾಗ ಎಲ್ಲವೂ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತದೆ.