Sachin Tendulkar – ಏಕದಿನ ಕ್ರಿಕೆಟ್ ನಲ್ಲಿ ಕ್ರಿಕೆಟ್ ದೇವ್ರ ಬೆಸ್ಟ್ -5 ಇನಿಂಗ್ಸ್ ಯಾವುದು ಗೊತ್ತಾ ?
ಸಚಿನ್ ತೆಂಡುಲ್ಕರ್ ಸುಮಾರು 23 ವರ್ಷಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿ ಸಂಚಲವನ್ನು ಮೂಡಿಸಿದ್ದರು. ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ಎಂಟು ವರ್ಷಗಳಾದ್ರೂ ಸಚಿನ್ ನಡೆದ ಬಂದ ಹಾದಿಯನ್ನು ಮರೆಯಲು ಸಾಧ್ಯವಿಲ್ಲ. ಸಚಿನ್ ನಡೆದ ಪ್ರತಿ ಹಜ್ಜೆಯಲ್ಲೂ ಒಂದೊಂದು ದಾಖಲೆಗಳು ಇರುತ್ತಿದ್ದವು. ಅದರಲ್ಲಿ ಕೆಲವು ದಾಖಲೆಗಳು ಅಳಿಸಿ ಹೋಗಿರಬಹುದು. ಆದ್ರೆ ಮಹತ್ವದ ದಾಖಲೆಗಳು ಇನ್ನೂ ಸಚಿನ್ ಹೆಸರಿನಲ್ಲೇ ರಾರಾಜಿಸುತ್ತಿವೆ. sachin tendulkar sportskarnataka
ಇದೀಗ ಟೀಮ್ ಇಂಡಿಯಾ ಸಾವಿರ ಏಕದಿನ ಪಂದ್ಯವನ್ನು ಅಡುತ್ತಿದೆ. ಇದರಲ್ಲಿ ಸಚಿನ್ ತೆಂಡುಲ್ಕರ್ ಒಬ್ಬರೇ 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾ 200, 300, 400, 500, 600, 700 ಮತ್ತು 800ನೇ ಏಕದಿನ ಪಂದ್ಯಗಳನ್ನು ಆಡುವಾಗ ಸಚಿನ್ ತಂಡದ ಆಟಗಾರನಾಗಿದ್ದರು.
ಇನ್ನು ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ತೆಂಡುಲ್ಕರ್ 49 ಶತಕ, 96 ಅರ್ಧಶತಕ ಸೇರಿದಂತೆ 18,426 ರನ್ ಗಳನ್ನು ದಾಖಲಿಸಿದ್ದಾರೆ. ಹಾಗೇ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ದಾಖಲಿಸಿದ್ದ ವಿಶ್ವದ ಮೊದಲ ಆಟಗಾರ ಎಂಬ ಗೌರವಕ್ಕೂ ಸಚಿನ್ ಪಾತ್ರರಾಗಿದ್ದಾರೆ.
ಇದೀಗ ಟೀಮ್ ಇಂಡಿಯಾದ ಅವಿಸ್ಮರಣೀಯ ಒಂದು ಸಾವಿರ ಏಕದಿನ ಪಂದ್ಯದ ವೇಳೆ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಆಗಿರುವ ಬದಲಾವಣೆಗಳನ್ನು ನೆನಪುಮಾಡಿಕೊಂಡಿದ್ದಾರೆ. ಜೊತೆಗೆ ಕೆಲವೊಂದು ಮಹೋನ್ನತ ಇನಿಂಗ್ಸ್ ಗಳನ್ನು ಸ್ಮರಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ತನ್ನ ಐದು ಶ್ರೇಷ್ಠ ಇನಿಂಗ್ಸ್ ಗಳನ್ನು ಸಚಿನ್ ಹೇಳಿಕೊಂಡಿದ್ದಾರೆ.
1- 2011ರ ವಿಶ್ವ ಕಪ್ ಫೈನಲ್ ಪಂದ್ಯ – ಇದನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಈ ಪಂದ್ಯವನ್ನು ಯಾವುದೇ ಪಂದ್ಯಗಳ ಜೊತೆ ಹೊಲಿಕೆ ಕೂಡ ಮಾಡಲು ಸಾಧ್ಯವಿಲ್ಲ. ನನ್ನ ಬದುಕಿನ ಅವಿಸ್ಮರಣೀಯ ದಿನ. ಈ ಪಂದ್ಯದಲ್ಲಿ ಸಚಿನ್ ಗಳಿಸಿದ್ದು 18 ರನ್. ಆದ್ರೆ ಸಚಿನ್ ಪಾಲಿಗೆ ಇದು ಸರ್ವಶ್ರೇಷ್ಠ ಏಕದಿನ ಪಂದ್ಯ.
2- 2010ರಲ್ಲಿ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆಯನ್ನು ಬರೆದಿದ್ದು. ಏಕದಿನ ಕ್ರಿಕೆಟ್ ನಲ್ಲಿ ದ್ವಿಶತ ದಾಖಲಿಸಿದ ವಿಶ್ವದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದರು. ಗ್ವಾಲಿಯರ್ ನಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ದಂಗುಬಡಿಸಿದ್ದ ಸಚಿನ್ ದ್ವಿಶತ ದಾಖಲಿಸಿರುವುದು ಏಕದಿನ ಕ್ರಿಕೆಟ್ ನ ಬೆಸ್ಟ್ ಇನಿಂಗ್ಸ್ ಅಂತ ಹೇಳಿದ್ದಾರೆ.
3- 1996ರಲ್ಲಿ ಆಸ್ಟ್ರೇಲಿಯಾ ವಿರುದ್ದ ಶಾರ್ಜಾದಲ್ಲಿ ದಾಖಲಿಸಿದ್ದ ಎರಡು ಶತಕಗಳು ಸಚಿನ್ ಪಾಲಿಗೆ ಮೂರನೇ ಬೆಸ್ಟ್ ಇನಿಂಗ್ಸ್ ಗಳಾಗಿವೆ. ಈ ಪಂದ್ಯದಲ್ಲಿ ಸ್ಪಿನ್ ಡಾಕ್ಟರ್ ಶೇನ್ ವಾರ್ನ್ ಗೆ ಸಚಿನ್ ಪಾಠ ಕಲಿಸಿದ್ದರು.
4- 2003ರ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ದ ದಾಖಲಿಸಿದ್ದ 98 ರನ್ ನಾಲ್ಕನೇ ಬೆಸ್ಟ್ ಏಕದಿನ ಇನಿಂಗ್ಸ್. ಅದರಲ್ಲೂ ಶೋಯಿಬ್ ಅಖ್ತರ್ ಅವರ ಎಸೆತವೊಂದನ್ನು ಸಿಕ್ಸರ್ ಗಟ್ಟಿದ್ದು ಕ್ರಿಕೆಟ್ ಅಭಿಮಾನಿಗಳು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ.
5- 1999ರ ವಿಶ್ವಕಪ್ ನಲ್ಲಿ ಕೀನ್ಯಾ ವಿರುದ್ದ ದಾಖಲಿಸಿದ್ದ ಶತಕ ಸಚಿನ್ ಪಾಲಿನ ಐದನೇ ಬೆಸ್ಟ್ ಏಕದಿನ ಇನಿಂಗ್ಸ್. ಈ ಪಂದ್ಯಕ್ಕೂ ಮುನ್ನ ಸಚಿನ್ ತೆಂಡುಲ್ಕರ್ ತಂದೆ ಪ್ರೋ. ರಮೇಶ್ ತೆಂಡುಲ್ಕರ್ ನಿಧನರಾಗಿದ್ದರು. ತಂದೆಯ ಅಂತ್ಯ ಕ್ರಿಯೆ ಮುಗಿಸಿ ಮತ್ತೆ ತಂಡವನ್ನು ಸೇರಿಕೊಂಡಿದ್ದ ಸಚಿನ್ ಕೀನ್ಯಾ ವಿರುದ್ದ ಶತಕ ದಾಖಲಿಸಿದ್ದರು. ಅಲ್ಲದೆ ಈ ಶತಕವನ್ನು ತನ್ನ ತಂದೆಗೆ ಅರ್ಪಣೆ ಮಾಡಿದ್ದರು.
ಹಾಗೇ ನೋಡಿದ್ರೆ ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ತೆಂಡುಲ್ಕರ್ ಅವರ ಬಹುತೇಕ ಇನಿಂಗ್ಸ್ ಗಳು ಕೂಡ ಶ್ರೇಷ್ಠವಾಗಿದ್ದವು. ಒಂದೊಂದು ಪಂದ್ಯದಲ್ಲೂ ಸಚಿನ್ ಅದ್ಭುತವಾದ ಆಟಗಳನ್ನು ಆಡುತ್ತಿದ್ದರು. ಅದರಲ್ಲೂ ಅವರು ಹೊಡೆಯುತ್ತಿದ್ದ ಬೌಂಡರಿಗಳನ್ನು ನೋಡುವುದೇ ಕಣ್ಣಿಗೆ ಆನಂದ. 90ರ ದಶಕದಲ್ಲಿ ಟೀಮ್ ಇಂಡಿಯಾದ ಪರಿಸ್ಥಿತಿ ಹೇಗಿತ್ತು ಅಂದ್ರೆ ಸಚಿನ್ ಅಂದ್ರೆ ಕ್ರಿಕೆಟ್… ಕ್ರಿಕೆಟ್ ಅಂದ್ರೆ ಸಚಿನ್.. ಸಚಿನ್ ಆಡಿದ್ರೆ ಮಾತ್ರ ಗೆಲುವು ಎಂಬಂತಿತ್ತು.
ಒಟ್ಟಿನಲ್ಲಿ ಸಚಿನ್ ತೆಂಡುಲ್ಕರ್ ಟೀಮ್ ಇಂಡಿಯಾದ ಬ್ರಾಂಡ್ ಕ್ರಿಕೆಟಿಗನಾಗಿ ವಿಶ್ವ ಕ್ರಿಕೆಟ್ ನಲ್ಲಿ ಪ್ರಖರ ಸೂರ್ಯನಂತೆ ಕಂಗೊಳಿಸಿದ್ದಾರೆ.ಅದಕ್ಕೆ ಅನ್ನೋದು ಸಚಿನ್ ತೆಂಡುಲ್ಕರ್ ಅವರನ್ನು ಕ್ರಿಕೆಟ್ ದೇವ್ರು ಅಂತ.