ಆ್ಯಶಸ್ (Ashes Series) ಸರಣಿಯನ್ನು ಹೀನಾಯವಾಗಿ ಸೋತಿದ್ದಕ್ಕೆ ಇಂಗ್ಲೆಂಡ್ (England) ತಂಡದ ಹೆಡ್ ಕೋಚ್ (Head Coach) ಕ್ರಿಸ್ ಸಿಲ್ವರ್ ವುಡ್ (Chris Silverwood) ತಲೆ ದಂಡವಾಗಿದ್ದು ಸಾಮಾನ್ಯ ಅನ್ನುವಂತಾಗಿದೆ. ಆದರೆ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 4-0ಯಿಂದ ಸೋಲಿಸಿದ ಮೇಲೂ ಆಸ್ಟ್ರೇಲಿಯಾ (Australia) ತಂಡದ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ (Justin Langer) ರಾಜಿನಾಮೆ ನೀಡಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ನಡೆ ಸಾಕಷ್ಟು ಅಚ್ಚರಿ ಹುಟ್ಟಿಸಿದೆ.
ಆ್ಯಶಸ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ (Pat Cummins) ನಾಯಕತ್ವದ ಆಸ್ಟ್ರೇಲಿಯಾ ತಂಡ 4-0ಯಿಂದ ಗೆಲ್ಲುವಲ್ಲಿ ಹೆಡ್ ಕೋಚ್ ಲ್ಯಾಂಗರ್ ದೊಡ್ಡ ಪಾತ್ರವಹಿಸಿದ್ದರು.ಆ್ಯಶಸ್ ಬಳಿಕ ಆಸ್ಟ್ರೇಲಿಯಾ 24 ವರ್ಷಗಳ ಬಳಿಕ ಪಾಕಿಸ್ತಾನ (Pakistan) ಪ್ರವಾಸಕ್ಕೆ ಸಿದ್ಧವಾಗುತ್ತಿತ್ತು. ಪಾಕ್ ನೆಲದಲ್ಲಿ ಮೂರು ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲಿತ್ತು. ಆದರೆ ಅದಕ್ಕೂ ಮುನ್ನವೇ ಕೋಚ್ ಲ್ಯಾಂಗರ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. 2018ರಿಂದ ಲ್ಯಾಂಗರ್ ಆಸ್ಟ್ರೇಲಿಯಾ ಪುರುಷರ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಲ್ಯಾಂಗರ್ ಅವರ ಹಠಾತ್ ರಾಜಿನಾಮೆಗೆ ಮುಖ್ಯ ಕಾರಣ ಏನೆಂಬುದು ಬಹಿರಂಗವಾಗಿಲ್ಲ. ಅವರ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್ ಆಂಡ್ರೂ ಮೆಕ್‌ಡೊನಾಲ್ಡ್ ತಂಡದ ಕೋಚಿಂಗ್ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.