ಆಕ್ರಮಣಕಾರಿ ಬೌಲಿಂಗ್ ಮೂಲಕ ಬಾಂಗ್ಲಾದೇಶವನ್ನು ಕಟ್ಟಿಹಾಕಿದ ಕೇಶವ್ ಮಹಾರಾಜ್(7/40) ಹಾಗೂ ಸಿಮೋನ್ ಹಾರ್ಮರ್(3/34) ಸೌತ್ ಆಫ್ರಿಕಾ ತಂಡಕ್ಕೆ 332 ರನ್ಗಳ ಭಾರೀ ಅಂತರದ ಗೆಲುವು ತಂದುಕೊಟ್ಟಿದ್ದಾರೆ.
ಪೋರ್ಟ್ ಎಲಿಜೆಬತ್ನ ಸೆಂಟ್ ಜಾರ್ಜ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿತು. ಬಾಂಗ್ಲಾದೇಶಕ್ಕೆ 413 ರನ್ಗಳ ಕಠಿಣ ಸವಾಲು ನೀಡಿದ ಸೌತ್ ಆಫ್ರಿಕಾ, 2ನೇ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶವನ್ನಕೇವಲ 80 ರನ್ಗಳಿಗೆ ಕಟ್ಟಿಹಾಕಿತು. ಆ ಮೂಲಕ 332 ರನ್ಗಳ ಬೃಹತ್ ಅಂತರದ ಗೆಲುವು ಸಾಧಿಸಿದ ಸೌತ್ ಆಫ್ರಿಕಾ, 2-0 ಅಂತರದಿಂದ ಸರಣಿ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಮಹಾರಾಜ್-ಹಾರ್ಮರ್ ಕಮಾಲ್
ಪ್ರವಾಸಿ ಬಾಂಗ್ಲಾದೇಶ ತಂಡಕ್ಕೆ 413 ರನ್ಗಳ ಟಾರ್ಗೆಟ್ ನೀಡಿದ ಸೌತ್ ಆಫ್ರಿಕಾ ತಂಡಕ್ಕೆ ಕೇಶವ್ ಮಹಾರಾಜ್ ಹಾಗೂ ಸಿಮೋನ್ ಹಾರ್ಮರ್ ಆಸರೆಯಾದರು. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಈ ಜೋಡಿ. ಬಾಂಗ್ಲಾ ಆಟಗಾರರಿಗೆ ಕಡಿವಾಣ ಹಾಕಿದರು. ಮೊದಲ ಟೆಸ್ಟ್ನಲ್ಲೂ ತಂಡದ ಗೆಲುವಿಗೆ ಕಾರಣವಾದ ಕೇಶವ್ ಮಹಾರಾಜ್ 40 ರನ್ ನೀಡಿ, ಪ್ರಮುಖ 7 ವಿಕೆಟ್ ಪಡೆದು ಟೆಸ್ಟ್ ಕ್ರಿಕೆಟ್ನಲ್ಲಿ ಸತತವಾಗಿ ಎರಡು ಬಾರಿ 7 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾಥ್ ನೀಡಿದ ಸಿಮೋನ್ ಹಾರ್ಮರ್ 34 ರನ್ನೀಡಿ 3 ವಿಕೆಟ್ ಪಡೆದರು.
ಬಾಂಗ್ಲಾದೇಶ ಪರ 27ಕ್ಕೆ 3 ವಿಕೆಟ್ಗಳಿಂದ ದಿನದಾಟ ಆರಂಭಿಸಿ ಲಿಟನ್ ದಾಸ್(27), ಹೆಮದಿ ಹಸನ್(20) ಹಾಗೂ ತಮೀಮ್ ಇಕ್ಬಾಲ್(13) ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ಎರಡಂಕ್ಕಿಯ ರನ್ ಕಲೆಹಾಕಲಿಲ್ಲ. ಹೀಗಾಗಿ ಬಾಂಗ್ಲಾದೇಶ 23.3 ಓವರ್ಗಳಲ್ಲಿ 80 ರನ್ಗಳಿಸಿ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ, ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರ್:
ಸೌತ್ ಆಫ್ರಿಕಾ:
1ನೇ ಇನ್ನಿಂಗ್ಸ್ 453 (ಮಹಾರಾಜ್ 84, ಎಲ್ಗರ್ 70 ಟೈಜುಲ್ 6-135)
2ನೇ ಇನ್ನಿಂಗ್ಸ್ 176/6 ಡಿಕ್ಲೇರ್ (ಎರ್ವೀ 41, ವರೆಯ್ನೆ 39*, ತೈಜುಲ್ 3-67)
ಬಾಂಗ್ಲಾದೇಶ:
1ನೇ ಇನ್ನಿಂಗ್ಸ್: 217 (ಮುಶ್ಫಿಕರ್ 51, ಮುಲ್ಡರ್ 3-25, ಹಾರ್ಮರ್ 3-39)
2ನೇ ಇನ್ನಿಂಗ್ಸ್: 80 (ಲಿಟ್ಟನ್ 27, ಮಹಾರಾಜ್ 7-40, ಹಾರ್ಮರ್ 3-34)