ಭರವಸೆಯ ಆಟಗಾರ ಯಜುವೇಂದ್ರ ಚಹಾಲ್ ಹಾಗೂ ಯುವ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್ ಅವರ ಜವಾಬ್ದಾರಿಯುತ ಆಟದಿಂದ ರಾಜಸ್ಥಾನ ರಾಯಲ್ಸ್, ಆರು ವಿಕೆಟ್ ಗಳಿಂದ ಪಂಜಾಬ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಏಳನೇ ಗೆಲುವು ದಾಖಲಿಸಿದೆ. ರಾಯಲ್ಸ್ ಪ್ಲೇ ಆಫ್ ಪಂದ್ಯದತ್ತ ಒಂದು ಹೆಜ್ಜೆ ಇಟ್ಟಿದೆ.
ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ವಿಕೆಟ್ ಗೆ ಜಾನಿ ಬೇರ್ ಸ್ಟೋ ಹಾಗೂ ಶಿಖರ್ ಧವನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಪವರ್ ಪ್ಲೇನಲ್ಲಿ ಉತ್ತಮ ಜೊತೆಯಾಟ ನಡೆಸಿದ ಜೋಡಿ 5.1 ಓವರ್ ಗಳಲ್ಲಿ 47 ರನ್ ಜೊತೆಯಾಟ ನೀಡಿತು. ಶಿಖರ್ ಧವನ್ (12), ಅಶ್ವಿನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಬಟ್ಲರ್ ಗೆ ಕ್ಯಾಚ್ ನೀಡಿದರು. ಎರಡನೇ ವಿಕೆಟ್ ಗೆ ಜಾನಿ ಬೇರ್ ಸ್ಟೋ ಹಾಗೂ ಭಾನುಕಾ ರಾಜಪಕ್ಸೆ ಜೋಡಿ 31 ಎಸೆತಗಳಲ್ಲಿ 42 ರನ್ ಸೇರಿಸಿತು. ರಾಜಪಕ್ಸೆ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್ ಸಿಡಿಸಿ ಔಟ್ ಆದರು. ನಾಯಕ ಮಯಾಂಕ್ ಅಗರ್ ವಾಲ್ 15 ರನ್ ಗಳಿಸಿ ಆಟ ಮುಗಿಸಿದರು.
ಆರಂಭಿಕ ಜಾನಿ ಬೇರ್ ಸ್ಟೋ ಮನಮೋಹಕ ಇನ್ನಿಂಗ್ಸ್ ಕಟ್ಟಿದರು. ಇವರು 40 ಎಸೆತಗಳಲ್ಲಿ 56 ರನ್ ಬಾರಿಸಿದರು. 8 ಬೌಂಡರಿ, 1 ಸಿಕ್ಸರ್ ಬಾರಿಸಿ ಅಬ್ಬರಿಸಿದರು. 4 ವಿಕೆಟ್ ಗೆ 119 ರನ್ ಗಳಿಂದ ಸಂಕಷ್ಟದಲ್ಲಿದ್ದ ತಂಡಕ್ಕೆ ಲಿಯಾಮ್ ಲಿವಿಂಗ್ ಸ್ಟೋನ್ ಹಾಗೂ ಜಿತೇಶ್ ಶರ್ಮಾ ಜೋಡಿ ಅಬ್ಬರದ ಆಟವಾಡಿತು. ಈ ಜೋಡಿ 26 ಎಸೆತಗಳಲ್ಲಿ 50 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿತು. ಜಿತೇಶ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 38 ರನ್ ಸಿಡಿಸಿದರೆ, ಲಿಯಾಮ್ 22 ರನ್ ಬಾರಿಸಿದರು. ಅಂತಿಮವಾಗಿ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 189 ರನ್ ಸೇರಿಸಿತು.
ರಾಜಸ್ಥಾನ ಪರ ಯಜುವೇಂದ್ರ ಚಹಾಲ್ 3 ವಿಕೆಟ್ ಕಬಳಿಸಿದರು. ಪ್ರಸಿದ್ಧ ಕೃಷ್ಣ, ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.
ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ ತಂಡದ ಆರಂಭ ಉತ್ತಮವಾಗಿತ್ತು. ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಜೋಡಿ ನಾಲ್ಕು ಓವರ್ ಗಳಲ್ಲಿ 46 ರನ್ ಸೇರಿಸಿತು. ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಬಟ್ಲರ್ 16 ಎಸೆತಗಳಲ್ಲಿ 30 ರನ್ ಸಿಡಿಸಿದರು. ರಬಾಡ ಎಸೆತದಲ್ಲಿ ಶಾರ್ಟ್ ಥರ್ಡ್ ಮ್ಯಾನ್ ನಲ್ಲಿ ಭಾನುಕಾಗೆ ಕ್ಯಾಚ್ ಗೆ ಬಲಿಯಾದರು. ನಾಯಕ ಸಂಜು ಸ್ಯಾಮ್ಸನ್ 23 ರನ್ ಬಾರಿಸಿ ರಿಷಿ ಧವನ್ ತೋಡಿದ ಖೆಡ್ಡಾಗೆ ಬಲಿಯಾದರು.
ಮೂರನೇ ವಿಕೆಟ್ ಗೆ ದೇವದತ್ ಪಡಿಕ್ಕಲ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಸೊಗಸಾದ ಆಟವನ್ನು ಆಡಿತು. ಈ ಜೋಡಿ 37 ಎಸೆತಗಳಲ್ಲಿ 56 ರನ್ ಸೇರಿಸಿತು. ಯಶಸ್ವಿ ಜೈಸ್ವಾಲ್ ಉತ್ತಮ ಬ್ಯಾಟಿಂಗ್ ನಡೆಸಿದರು. ಇವರು 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ 68 ರನ್ ಸಿಡಿಸಿದರು. ದೇವದತ್ 31 ರನ್ ಬಾರಿಸಿ ಅರ್ಷದೀಪ್ ಸಿಂಗ್ ಗೆ ವಿಕೆಟ್ ಒಪ್ಪಿಸಿದರು.
ಶಿಮ್ರೊನ್ ಹೆಟ್ಮೆಯರ್ ಅಜೇಯ 31 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ರಾಯಲ್ಸ್ 19.4 ಓವರ್ ಗಳಲ್ಲಿ 4 ವಿಕೆಟ್ ಗೆ 190 ರನ್ ಸಿಡಿಸಿ ಜಯ ಸಾಧಿಸಿತು.
That's that from Match 52 as @rajasthanroyals win by 6 wickets.#TATAIPL #PBKSvRR pic.twitter.com/RloiU9m1LJ
— IndianPremierLeague (@IPL) May 7, 2022